ಕ್ಯಾನ್‌ಬೆರಾ: ಆಸೀಸ್ ವಿರುದ್ದ ಮೂರನೇ ಏಕದಿನ ಪಂದ್ಯದಲ್ಲಿ ಹಾಗೂ ಸರಣಿಯಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಉತ್ತಮ ಆರಂಭ ಪಡೆಯದ ಟೀಂ ಇಂಡಿಯಾಕ್ಕೆ ಈಗ ನಾಯಕ ವಿರಾಟ್ ಕೊಹ್ಲಿಯೇ ಆಧಾರ ಸ್ಥಂಭ. ಆರಂಭಿಕರಿಬ್ಬರು ಹಾಗೂ ಶ್ರೇಯಸ್ ಅಯ್ಯರ್ ಈಗಾಗಲೇ ಪೆವಿಲಿಯನ್ ಸೇರಿದ್ದಾರೆ. ಶುಬ್ಮನ್ ಗಿಲ್ 33 ರನ್ ಗಳಿಸಿ ಔಟಾದರು. ನಾಯಕ ಕೊಹ್ಲಿ 44 ಮತ್ತು ಕೆ.ಎಲ್.ರಾಹುಲ್ ಬ್ಯಾಟಿಂಗ್ ಮುಂದುವರೆಸಿದ್ದಾರೆ. ತಂಡ ಮೂರು ವಿಕೆಟ್ ಕಳೆದುಕೊಂಡು 123 ರನ್ ಗಳಿಸಿತ್ತು.
ಭಾರತ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಮಾಯಾಂಕ್ ಅಗರ್ವಾಲ್, ನವದೀಪ್ ಸೈನಿ, ಮೊಹಮ್ಮದ್ ಶಮಿ ಮತ್ತು ಯುಜ್ವೇಂದ್ರ ಚಾಹಲ್ ಬದಲಿಗೆ ತಂಗರಸು ನಟರಾಜನ್, ಶುಭ್‌ಮನ್ ಗಿಲ್, ಶಾರ್ದುಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ನಟರಾಜನ್ ಅವರಿಗೆ ಇದು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ.
ಆಸ್ಟ್ರೇಲಿಯಾದಲ್ಲೂ ಮೂರು ಬದಲಾವಣೆಗಳಾಗಿವೆ. ಗಾಯಗೊಂಡ ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ಬದಲಿಗೆ ಕ್ಯಾಮೆರಾನ್ ಗ್ರೀನ್, ಸೀನ್ ಅಬಾಟ್ ಮತ್ತು ಆಷ್ಟನ್ ಅಗರ್ ಪಂದ್ಯದಲ್ಲಿ ಆಡುತ್ತಿದ್ದಾರೆ. ಗ್ರೀನ್‌ಗೆ, ಇದು ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿದೆ.