ಸಿಡ್ನಿ: ಈಗಾಗಲೇ ಟಿ20 ಸರಣಿ ಸೋತಿರುವ ಆತಿಥೇಯ ಆಸೀಸ್ ತಂಡ, ಮೂರನೇ ಪಂದ್ಯದಲ್ಲಿ ಪ್ರವಾಸಿ ಭಾರತಕ್ಕೆ 187 ರನ್ನುಗಳ ಗುರಿ ನಿಗದಿ ಮಾಡಿದೆ.
ಕಳೆದ ಪಂದ್ಯದಂತೆ ಇಂದು ಕೂಡ ಮ್ಯಾಥ್ಯೂ ವೇಡ್ ಹಾಗೂ ಗ್ಲೆನ್ ಮ್ಯಾಕ್ಸ್’ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ, ಅರ್ಧಶತಕಗಳ ಕಾಣಿಕೆ ನೀಡಿದರು. ನಾಯಕ ಫಿಂಚ್ ರನ್ ಗಳಿಸದೆ, ಸ್ಪಿನ್ನರ್ ವಾಷಿಂಗ್ಟನ್ ಸುಂದರ್‌ಗೆ ಬಲಿಯಾದರು. ಸ್ಟಿವನ್ ಸ್ಮಿತ್ ದೀರ್ಘ ಇನ್ನಿಂಗ್ಸ್ ಬೆಳೆಸಲಿಲ್ಲ. ತಂಡದ ಮೊತ್ತ 169 ಇರುವವರೆಗೂ 200 ಗಡಿ ತಲುಪುವ ಸಾಧ್ಯತೆ ಇಲ್ಲದೇ ಇರಲಿಲ್ಲ. ಆದರೆ, ಅಂತಿಮ ಸ್ಪೆಲ್‌ನಲ್ಲಿ ಯುವ ವೇಗಿ ಟಿ.ನಟರಾಜನ್ ಅವರ ನಿಯಂತ್ರಿತ ದಾಳಿ, ರನ್ ವೇಗಕ್ಕೆ ಕಡಿವಾಣ ಹಾಕಿತು.
ವೇಡ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರೆ, ಮ್ಯಾಕ್ಸ್’ವೆಲ್ ನಟರಾಜನ್ ಬೌಲಿಂಗಿನಲ್ಲಿ ಬೌಲ್ಡ್ ಆದರು. ಈ ಮೂಲಕ ತಂಡ 200 ರನ್ ಪೇರಿಸುವ ಕನಸು ನನಸಾಗಲಿಲ್ಲ. ಆಸ್ಟ್ರೇಲಿಯಾ ವಿಕೆಟ್ ಕೀಪರ್ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ (80) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (54) ಬಿರುಸಿನ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 186 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಕೊನೆಯ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕ್ಲೀನ್ ಬೌಲ್ಡ್ ಮಾಡಿದ ತಂಗರಸು ನಟರಾಜನ್, ಮಗದೊಮ್ಮೆ ಪ್ರಭಾವಿ ಎನಿಸಿಕೊಂಡರು. ಅಂತಿಮವಾಗಿ ಆಸೀಸ್ ತಂಡವು ಐದು ವಿಕೆಟ್ ನಷ್ಟಕ್ಕೆ 186 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. 36 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.
ಡಾರ್ಸಿ ಶಾರ್ಟ್ (7), ಮೊಯಿಸೆಸ್ ಹೆನ್ರಿಕ್ಸ್ (5*) ಹಾಗೂ ಡ್ಯಾನಿಯಲ್ ಸ್ಯಾಮ್ಸ್ (4*) ರನ್ ಗಳಿಸಿದರು. ಭಾರತದ ಪರ ವಾಷಿಂಗ್ಟನ್ ಸುಂದರ್ ಎರಡು ಮತ್ತು ಟಿ ನಟರಾಜನ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.