Sunday, 15th December 2024

ದಕ್ಷಿಣ ಆಫ್ರಿಕಾ ತಲುಪಿದ ಟೀಂ ಇಂಡಿಯಾ

Team India in SA

ಮುಂಬೈ/ಜೊಹಾನ್ಸ್‌ಬರ್ಗ್: ಚೊಚ್ಚಲ ಟೆಸ್ಟ್ ಸರಣಿ ಜಯಿಸುವ ಮಹತ್ವಾಕಾಂಕ್ಷೆಯೊಂದಿಗೆ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಗುರುವಾರ ದಕ್ಷಿಣ ಆಫ್ರಿಕಾ ತಲುಪಿದೆ.

ಗುರುವಾರ ಮುಂಬೈನಿಂದ ನಿರ್ಗಮಿಸಿದ ಭಾರತ ತಂಡ ಸಂಜೆಯ ವೇಳೆ ಜೊಹಾನ್ಸ್‌ಬರ್ಗ್ ತಲುಪಿತು. 3 ಪಂದ್ಯಗಳ ಟೆಸ್ಟ್ ಸರಣಿಗೆ ಡಿ.26ರಂದು ಸೆಂಚುರಿ ಯನ್‌ನಲ್ಲಿ ಚಾಲನೆ ಸಿಗಲಿದೆ. ಭಾರತ ತಂಡ ವಿಶೇಷ ಬಾಡಿಗೆ ವಿಮಾನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದು, ಪ್ರವಾಸದ ಮೊದಲ ದಿನವಷ್ಟೇ ಕ್ವಾರಂಟೈನ್‌ ನಲ್ಲಿರಲಿದೆ. ಬಳಿಕ ಬಯೋಬಬಲ್‌ನಲ್ಲೇ ಅಭ್ಯಾಸ ಆರಂಭಿಸ ಲಿದೆ.

ಉಪನಾಯಕ ರೋಹಿತ್ ಶರ್ಮ ಗಾಯದಿಂದಾಗಿ ಕೊನೇಕ್ಷಣದಲ್ಲಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಹಾವಳಿ ಹೆಚ್ಚಾಗಿರುವ ನಡುವೆ ಈ ಸರಣಿ ನಿಗದಿಯಾಗಿದೆ. ಪ್ರವಾಸದ ವೇಳಾಪಟ್ಟಿ ಈ ಮೊದಲೇ ಬದಲಾವಣೆ ಕಂಡಿದ್ದು, ಒಂದು ವಾರ ತಡವಾಗಿ ಟೆಸ್ಟ್ ಸರಣಿ ಶುರುವಾಗಲಿದೆ ಮತ್ತು ಟಿ20 ಸರಣಿಯನ್ನು ಕೈಬಿಡಲಾಗಿದೆ.

ಮಗುವಿನ ಚಿತ್ರ ಕ್ಲಿಕ್ಕಿಸಬೇಡಿ: ಎಲ್ಲ ಆಟಗಾರರು ಕುಟುಂಬದ ಸದಸ್ಯರ ಜತೆ ಪ್ರವಾಸಕ್ಕೆ ತೆರಳಿದ್ದು, ಅದರಂತೆ ಕೊಹ್ಲಿ ಜತೆಗೆ ಪತ್ನಿ ಅನುಷ್ಕಾ ಶರ್ಮ ಮತ್ತು ಪುತ್ರಿ ವಾಮಿಕಾ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಬಸ್‌ನಿಂದ ಮೊದಲಿಗೆ ಇಳಿದು ಬಂದ ಕೊಹ್ಲಿ, ‘ಮಗುವಿನ ಚಿತ್ರ ಕ್ಲಿಕ್ಕಿಸಬೇಡಿ’ ಎಂದು ಮನವಿ ಮಾಡಿಕೊಂಡರು.