Sunday, 13th October 2024

ಕಿವೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಇಂದು

ನವದೆಹಲಿ/ ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದೇ ನ.17 ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ 15 ಆಟಗಾರರ ಹೆಸರನ್ನು ಆಯ್ಕೆ ಮಾಡಲಿದೆ.

ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್​ ಸರಣಿಗಾಗಿ ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ಆಟಗಾರರ ಆಯ್ಕೆ ಪ್ರಕ್ರಿಯೆಗಾಗಿ ಸಭೆ ಕರೆದಿದೆ. ಭಾರತದಲ್ಲೇ ನಡೆಯಲಿರುವ ಈ ಸರಣಿಗೆ ಈಗಾಗಲೇ ನ್ಯೂಜಿ ಲೆಂಡ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟ ಮಾಡಿದೆ. ಹೀಗಾಗಿ ಬಿಸಿಸಿಐ ಇಂದು ಸಂಜೆ 15 ಆಟಗಾರರ ಭಾರತ ತಂಡ ವನ್ನು ಸಿದ್ಧಪಡಿಸಿ ಘೋಷಣೆ ಮಾಡುವ ಸಾಧ್ಯತೆ ಇದೆ. ಸರಣಿಗೆ ಪ್ರಮುಖ ಅನುಭವಿ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ರಿಷಭ್ ಪಂತ್, ರವೀಂದ್ರ ಜಡೇಜಾ ಅವರು ಈ ಸರಣಿಯಿಂದ ಹಿಂದೆ ಸರಿಯಲಿದ್ದಾರಂತೆ. ಕಳೆದ ನಾಲ್ಕು ತಿಂಗಳಲ್ಲಿ ಸತತ ಮೂರು ಬಯೋ-ಬಬಲ್ಸ್​ ಕಳೆದಿದ್ದಾರೆ. ಟಿ 20 ವಿಶ್ವ ಕಪ್ ನಂತರ, ಅವರು ಡಿಸೆಂಬರ್ ಅಂತ್ಯದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುಂಚಿತವಾಗಿ ವಿಶ್ರಾಂತಿ ಪಡೆಯಲಿದ್ದಾರೆ.

ರೋಹಿತ್ ಶರ್ಮಾ ನೂತನ ನಾಯಕನ ಜವಾಬ್ದಾರಿ ಹೊರಲಿದ್ದು, ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸ ಲಿದ್ದಾರೆ. ಸದ್ಯ ನ್ಯೂಜಿ ಲೆಂಡ್ ವಿರುದ್ಧದ ಟಿ20 ಸರಣಿಗೆ ಸಾಕಷ್ಟು ಹೊಸ ಮುಖಗಳಿಗೆ ಬಿಸಿಸಿಐ ಅವಕಾಶ ನೀಡಲಿದೆಯಂತೆ.

ಕಿವೀಸ್ ವಿರುದ್ಧದ ಟಿ20 ಸರಣಿಗೆ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ರುತು ರಾಜ್ ಗಾಯಕ್ವಾಡ್ ಅವರದ್ದು. ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೆಂಕಟೇಶ್ ಅಯ್ಯರ್​ ಕೂಡ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಆಯ್ಕೆ ಆಗುವ ಸಂಭವವಿದೆ ಎನ್ನಲಾಗಿದೆ.

ಉಳಿದಂತೆ ಆವೇಶ್ ಖಾನ್, ಚೇತನ್ ಸಕಾರಿಯಾ, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ ಮತ್ತು ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ.

ಭಾರತ ಕ್ರಿಕೆಟ್ ತಂಡ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ನ.17 ರಂದು ಜೈಪುರದಲ್ಲಿ ಮೊದಲ ಟಿ20 ನಡೆದರೆ, ನ.19 ರಂದು ರಾಂಚಿ ಹಾಗೂ ನ.21 ರಂದು ಕೋಲ್ಕತ್ತಾ ದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಟಿ20 ಪಂದ್ಯವನ್ನು ಆಯೋಜಿಸಲಾಗಿದೆ. ಟೆಸ್ಟ್ ಪಂದ್ಯಗಳು ಕಾನ್ಪುರ (ನ.25-29) ಹಾಗೂ ಮುಂಬೈ (ಡಿ.3-7) ರಂದು ನಡೆಯಲಿದೆ.

15 ಸದಸ್ಯರ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಪೃಥ್ವಿ ಶಾ, ರುತುರಾಜ್ ಗಾಯಕ್ವಾಡ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಯುಜ್ವೇಂದ್ರ ಚಹಾಲ್, ರಾಹುಲ್ ಚಹಾರ್.