Friday, 22nd November 2024

ಮುಂಬೈ ಟೆಸ್ಟ್ ಗೆಲುವು: ಟೀಂ ಇಂಡಿಯಾಗೆ ನಂಬರ್ ಒನ್ ಪಟ್ಟ

Team India as No One Test Team
ಮುಂಬೈ: ಎರಡನೇ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್​ನಲ್ಲಿ ಮತ್ತೊಮ್ಮೆ ನಂಬರ್ ಒನ್ ತಂಡ ವಾಗಿ ಹೊರಹೊಮ್ಮಿದೆ. ನ್ಯೂಜಿಲೆಂಡ್‌ನಿಂದ ಅಗ್ರ ಸ್ಥಾನ ಕಸಿದುಕೊಂಡಿದೆ.ಮುಂಬೈನಲ್ಲಿ ನಡೆದ ಎರಡನೇ ಮತ್ತು ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ನಾಲ್ಕನೇ ದಿನ ನ್ಯೂಜಿಲೆಂಡ್ ತಂಡವನ್ನು 372 ರನ್‌ ಗಳಿಂದ ಸೋಲಿಸುವ ಮೂಲಕ ಭಾರತ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು.

540 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 167 ರನ್‌ಗಳಿಗೆ ಆಲೌಟ್ ಆಯಿತು. ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್ ಗಳಿಸಿತ್ತು. ಇದಕ್ಕೆ ಉತ್ತರ ವಾಗಿ ನ್ಯೂಜಿಲೆಂಡ್ ತಂಡವನ್ನು 62 ರನ್‌ಗಳಿಗೆ ಆಲ್​ಔಟ್ ಮಾಡಿತು. ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್‌ಗೆ 276 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ನ್ಯೂಜಿಲೆಂಡ್‌ ತಂಡವು ಜೂನ್ 2021 ರಲ್ಲಿ ಭಾರತದಿಂದ ಈ ಸ್ಥಾನಮಾನ ಕಸಿದುಕೊಂಡಿತು. ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಗೆಲ್ಲುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸರಣಿ ಆರಂಭವಾದಾಗ ನ್ಯೂಜಿಲೆಂಡ್ 126 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿತ್ತು. ಅದೇ ಸಮಯದಲ್ಲಿ ಭಾರತ 119 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿತ್ತು. ಆಸ್ಟ್ರೇಲಿಯಾ ಪ್ರಸ್ತುತ 108 ರೇಟಿಂಗ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಇಂಗ್ಲೆಂಡ್ 107 ರೇಟಿಂಗ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.