ಸಿಲೆಟ್: ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್ ವಿರುದ್ಧ 74 ರನ್ ಅಂತರದ ಸುಲಭ ಜಯ ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದ ಥಾಯ್ಲೆಂಡ್ ತಂಡದ ನಾಯಕಿ ನೆರುಮಾಲ್ ಚೈವೈ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಹರ್ಮನ್ ಪ್ರೀತ್ ಕೌರ್ ಪಡೆ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳನ್ನು ಕಳೆದುಕೊಂಡು 148 ರನ್ ಗಳಿಸಿತು.
ಬಿರುಸಿನ ಬ್ಯಾಟರ್ ಶೆಫಾಲಿ ವರ್ಮಾ ಕೇವಲ 28 ಎಸೆತಗಳಲ್ಲಿ 48 ರನ್ ಚಚ್ಚಿದರು. ಜೆಮಿಯಾ ರಾಡ್ರಿಗಸ್ (27 ರನ್) ಮತ್ತು ನಾಯಕಿ ಕೌರ್ (36 ರನ್) ಉತ್ತಮ ಆಟವಾಡಿದರು. ಸೊರ್ನಾರಿನ್ ಟಿಪೋಚ್ ಮೂರು ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನತ್ತಿದ ಥಾಯ್ಲೆಂಡ್ ಪಡೆ 9 ವಿಕೆಟ್ ಕಳೆದುಕೊಂಡು 74 ರನ್ ಗಳಿಸಲಷ್ಟೇ ಶಕ್ತವಾಯಿತು.
ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಥಾಯ್ಲೆಂಡ್ ಕೇವಲ 21 ರನ್ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ನಾಯಕಿ ಚೈವೈ ಮತ್ತು ನತಯ್ಯಾ ಬೂಚತಾಮ್ 42 ರನ್ ಕೂಡಿಸಿ ಕುಸಿತ ತಪ್ಪಿಸಿದರು. ಈ ಇಬ್ಬರೂ ತಲಾ 21 ರನ್ ಗಳಿಸಿದ್ದಾಗ ಪೆವಿಲಿಯನ್ ಸೇರಿಕೊಂಡರು. ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗದಿದ್ದರೂ, ಸೋಲಿನ ಅಂತರ ಕಡಿಮೆ ಮಾಡಿದರು.
ಥಾಯ್ಲೆಂಡ್ಗೆ ಆರಂಭದಲ್ಲೇ ಆಘಾತ ನೀಡಿದ ಸ್ಪಿನ್ನರ್ ದೀಪ್ತಿ ಶರ್ಮಾ ನಾಲ್ಕು ಓವರ್ಗಳಲ್ಲಿ ಕೇವಲ 7 ರನ್ ನೀಡಿ 3 ವಿಕೆಟ್ ಕಬಳಿಸಿದರು.