Thursday, 21st November 2024

ಸತತ 25ನೇ ಏಕದಿನ ಗೆಲುವು ದಾಖಲಿಸಿದ ಆಸೀಸ್‌ ವನಿತೆಯರು

ಮಕಾಯ್‌: ಶೋಚನೀಯ ವೈಫ‌ಲ್ಯ ಅನುಭವಿಸಿದ ಭಾರತದ ವನಿತೆಯರು, ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದ್ದಾರೆ.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 8 ವಿಕೆಟಿಗೆ ಕೇವಲ 225 ರನ್‌ ಗಳಿಸಿದರೆ, ಆಸ್ಟ್ರೇಲಿಯ 41 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 227 ರನ್‌ ಬಾರಿಸಿತು. ಇದು ಆಸ್ಟ್ರೇಲಿಯದ ಸತತ 25ನೇ ಏಕದಿನ ಗೆಲುವು. 2018ರ ಮಾರ್ಚ್‌ನಲ್ಲಿ ಕಾಂಗರೂ ವನಿತೆಯರ ಗೆಲುವಿನ ಓಟ ಆರಂಭಗೊಂಡಿತ್ತು.

ಮಿಥಾಲಿ ರಾಜ್‌ ದಾಖಲೆ: ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಗಮನ ಸೆಳೆದವರು ನಾಯಕಿ ಮಿಥಾಲಿ ರಾಜ್‌. ಏಕೈಕ ಅರ್ಧಶತಕ ದಾಖಲಿಸಿದರು. ಇದು ಅವರ ಸತತ 5ನೇ ಏಕದಿನ ಅರ್ಧಶತಕ. ಶಫಾಲಿ ವರ್ಮ (8), ಸ್ಮತಿ ಮಂಧನಾ (16) ಬೇಗನೇ ಔಟಾದುದರಿಂದ ಮಿಥಾಲಿ ತುಸು ನಿಧಾನಗತಿಯಲ್ಲಿ ಆಡಬೇಕಾ ಯಿತು. ಅವರ ಗಳಿಕೆ 107 ಎಸೆತಗಳಿಂದ 63 ರನ್‌. ಇದರಲ್ಲಿ ಕೇವಲ 3 ಬೌಂಡರಿ ಸೇರಿತ್ತು.

ಈ ಇನಿಂಗ್ಸ್‌ ವೇಳೆ ಮಿಥಾಲಿ ರಾಜ್‌ ಕ್ರಿಕೆಟ್‌ ಬಾಳ್ವೆಯಲ್ಲಿ 20 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆಗೈದರು. ಇದರಲ್ಲಿ ಮೂರೂ ಮಾದರಿಯ ಅಂತಾ ರಾಷ್ಟ್ರೀಯ ಕ್ರಿಕೆಟಿನ 10,400 ರನ್‌ ಸೇರಿದೆ.