Friday, 22nd November 2024

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ, ಸರಣಿ ಸಮಬಲ

ಮೇಲ್ಬರ್ನ್: ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೆಸ್ಟ್ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದೆ.

ನಾಲ್ಕನೇ ದಿನದಾಟದ ಅಂತಿಮ ಇನ್ನಿಂಗ್ಸ್ ನಲ್ಲಿ 70 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಆರಂಭದಲ್ಲೇ ಮಯಾಂಕ್ ಅಗರ್ ವಾಲ್ (5) ಮತ್ತು ಚೇತೇಶ್ವರ ಪೂಜಾರ (3) ರನ್ ಗಳಿಗೆ ಓಟ್ ಆಗುವ ಮೂಲಕ ಆರಂಭಿಕ ಆಘಾತ ಎದುರಾಗಿತ್ತು. ಯುವ ಬ್ಯಾಟ್ಸ್ ಮನ್ ಶುಭ್ಮನ್ ಗಿಲ್ 35 ಮತ್ತು ನಾಯಕ ಅಜಿಂಕ್ಯ ರಹಾನೆ 27 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆಸ್ಟ್ರೇಲಿಯಾ ತಂಡವನ್ನು 200 ರನ್ ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಆರನೇ ಕ್ರಮಾಂಕದಲ್ಲಿ ಆಡಿದ ಕ್ಯಾಮರೂನ್ ಗ್ರೀನ್ 45 ರನ್ ಗಳಿಸಿ ಆಸ್ಟ್ರೇಲಿಯಾ ಪರ ಹೆಚ್ಚಿನ ರನ್ ಪಡೆದರೆ, ಮ್ಯಾಥ್ಯೂ ವಾಡೆ 40ರನ್ ಗಳಿಸಿದರು. ಗ್ರೀನ್ ಮತ್ತು ಪ್ಯಾಟ್ ಪ್ಯಾಟ್ ಕಮ್ಮಿನ್ಸ್ ಏಳನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಗಳಿಸಿದರು. ಹೊಸ ಬಾಲ್ ತೆಗೆದುಕೊಂಡ ನಂತರ ಈ ಜೋಡಿ ಬೇರ್ಪಟ್ಟಿತು.

ಭಾರತ ಪರ ವೇಗಿ ಮೊಹಮ್ಮದ್ ಸಿರಾಜ್ 37 ರನ್ ಗಳಿಗೆ ಮೂರು ವಿಕೆಟ್ ಪಡೆದರೆ, ಜಸ್ಪ್ರೀತ್ ಬೂಮ್ರಾ 54ಕ್ಕೆ ಎರಡು, ರವೀಂದ್ರ ಜಡೇಜಾ 28ಕ್ಕೆ ಎರಡು ಮತ್ತು ಆರ್ ಅಶ್ವಿನ್ 71ಕ್ಕೆ 2 ವಿಕೆಟ್ ಕಬಳಿಸಿದರು.

ಮೆಲ್ಬರ್ನ್ ಅಂಗಳದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.