Sunday, 15th December 2024

ಹತ್ತು ವಿಕೆಟ್‌ ಜಯ ದಾಖಲಿಸಿದ ವಿರಾಟ್‌ ಪಡೆ, ಅಶ್ವಿನ್‌ ಅಮೋಘ, ಅಕ್ಷರ್‌ ಅಪ್ರತಿಮ

ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಭರ್ಜರಿ ಗೆಲುವಿನ ಸಾಧನೆ ಮಾಡಿದೆ. ಪಿಂಕ್ ಬಾಲ್‌ನಲ್ಲೂ ಸ್ಪಿನ್ ಮೋಡಿ ತೋರಿಸಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಭಾರತ ತಂಡ ಕಂಗೆಡಿಸಿದೆ.

ಸ್ಥಳೀಯ ಆಟಗಾರ ಅಕ್ಷರ್ ಪಟೇಲ್ ಪಂದ್ಯದಲ್ಲಿ 11 ವಿಕೆಟ್ ಕಬಳಿಸಿದ ಸಾಧನೆಯೊಂದಿಗೆ ಭಾರತ ತಂಡ 10 ವಿಕೆಟ್‌ಗಳಿಂದ ಅಮೋಘ ಗೆಲುವು ಕಂಡಿತು. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿ ದ್ದಲ್ಲದೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಮತ್ತಷ್ಟು ಸನಿಹ ವಾಯಿತು.

ಗುರುವಾರದ ಪಂದ್ಯದಲ್ಲಿ 3 ವಿಕೆಟ್‌ಗೆ 99 ರನ್‌ಗಳಿಂದ 2ನೇ ದಿನದಾಟ ಆರಂಭಿ ಸಿದ ಭಾರತ ತಂಡ, ರೋಹಿತ್ ಶರ್ಮ (66 ರನ್) ಅರ್ಧಶತಕದಾಟದ ನಡುವೆಯೂ ಜೋ ರೂಟ್ (8ಕ್ಕೆ 5) ಹಾಗೂ ಜಾಕ್ ಲೀಚ್ (54ಕ್ಕೆ 4) ಮಾರಕ ದಾಳಿಗೆ ನಲುಗಿ 145 ರನ್‌ಗಳಿಗೆ ಸರ್ವಪತನ ಕಂಡಿತು.

ಇದರಿಂದ 33 ರನ್ ಮುನ್ನಡೆ ಸಾಧಿಸಿತು. ಬಳಿಕ ಎರಡನೇ ಸರದಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ, ಅಕ್ಷರ್ ಪಟೇಲ್ (32ಕ್ಕೆ 5) ಹಾಗೂ ಆರ್.ಅಶ್ವಿನ್ (48ಕ್ಕೆ 4) ಜೋಡಿಯ ಮಾರಕ ದಾಳಿಗೆ ನಲುಗಿ 81 ರನ್‌ಗಳಿಗೆ ಸರ್ವಪತನ ಕಂಡಿತು. ಮತ್ತೊಂದೆಡೆ ಅಶ್ವಿನ್ ವೇಗವಾಗಿ 400 ವಿಕೆಟ್ ಪಡೆದ ಕೀರ್ತಿ ಗೆ ಪಾತ್ರರಾಗಿದ್ದಾರೆ.

ಅಕ್ಷರ್ ಪಟೇಲ್ 5 ಹಾಗೂ ಅಶ್ವಿನ್ 4 ವಿಕೆಟ್ ಪಡೆದರು. ಅಲ್ಪ ಮೊತ್ತದ ಸವಾಲನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿ ಭಾರತ ಗೆಲುವಿನ ನಗೆ ಬೀರಿತು. ರೋಹಿತ್ ಶರ್ಮಾ 25 ಹಾಗೂ ಶುಭ್ ಮನ್ ಗಿಲ್ 15 ರನ್ ಗಳಿಸಿ ಅಜೇಯ ರಾಗುಳಿದರು. ಈ ಮೂಲಕ ಹತ್ತು ವಿಕೆಟ್ ಗಳಿಂದ ಕೊಹ್ಲಿ ಪಡೆ ಜಯಭೇರಿ ಬಾರಿಸಿತು. ಆದರೆ ಇಂಗ್ಲೆಂಡ್ ಸತತ ಎರಡೂ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿತು.

ಮಾರಕ ಬೌಲಿಂಗ್ ಪ್ರದರ್ಶಿಸಿದ ಅಕ್ಷರ್ ಪಟೇಲ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.