ಪಾರ್ಲ್: ಬೋಲ್ಯಾಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಆಕರ್ಷಕ ಶತಕ ಹಾಗೂ ಅರ್ಷದೀಪ್ ಸಿಂಗ್ ಮಿಂಚಿನ ಬೌಲಿಂಗ್ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಅದ್ಭುತ ಜಯ ದಾಖಲಿಸುವ ಮೂಲಕ 2-1 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು.
ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಸಂಜು ಸ್ಯಾಮ್ಸನ್ (108 ರನ್, 114 ಎಸೆತ, 6 ಬೌಂಡರಿ, 3 ಸಿಕ್ಸರ್) ಅಮೋಘ ಶತಕ ಮತ್ತು ತಿಲಕ್ ವರ್ಮಾ (52 ರನ್, 77 ಎಸೆತ, 5 ಬೌಂಡರಿ 1 ಸಿಕ್ಸರ್) ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿತು.
ದಕ್ಷಿಣ ಆಫ್ರಿಕಾ ಪರ ಬಿ ಹೆಂಡ್ರಿಕ್ಸ್ 3 ವಿಕೆಟ್ ಪಡೆದರೆ, ನಂಡ್ರೆ ಬರ್ಗರ್ 2 ವಿಕೆಟ್ ಕಬಳಿಸಿದರು. ಉಳಿದಂತೆ ವಿಲಿಯಮ್ಸ್, ವಿಯಾನ್ ಮುಲ್ಡರ್ ಹಾಗೂ ಕೇಶವ್ ಮಹರಾಜ್ ತಲಾ ಒಂದೊಂದು ವಿಕೆಟ್ ತೃಪ್ತಿಪಟ್ಟುಕೊಂಡರು.
ಟೀಮ್ ಇಂಡಿಯಾ ನೀಡಿದ್ದ 297 ರನ್ಗಳ ಗುರಿ ಬೆನ್ನತ್ತಿದ ಹರಿಣ ಪಡೆ 45.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ ಕೇವಲ 218 ರನ್ ಗಳಿಸಲಷ್ಟೇ ಶಕ್ತವಾಯಿತು.
ಮಿಂಚಿನ ಬೌಲಿಂಗ್ ದಾಳಿ ಪ್ರದರ್ಶಿಸಿದ ಅರ್ಷದೀಪ್ ಸಿಂಗ್ ಪ್ರಮುಖ 4 ವಿಕೆಟ್ ಕಬಳಿಸಿದರು. ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ತಲಾ 2 ವಿಕೆಟ್ ಪಡೆದರೆ, ಮುಕೇಶ್ ಕುಮಾರ್, ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು