ಮುಂಬೈ: ಕಳೆದ 2019ರ ವಿಶ್ವಕಪ್ ಸೆಮೀಸ್ ಸೇಡನ್ನು ರೋಹಿತ್ ಪಡೆ ತೀರಿಸಿಕೊಂಡಿದ್ದು, 70 ರನ್ನಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಅಲ್ಲದೇ 2023ರ ವಿಶ್ವಕಪ್ನಲ್ಲಿ 10ನೇ ಜಯ ದಾಖಲಿಸಿದೆ.
ಕಿವೀಸ್ ಪಡೆ ಮೂರನೇ ವಿಕೆಟ್ಗೆ ಉತ್ತಮ ಕಮ್ಬ್ಯಾಕ್ ಮಾಡಿತು. ಡೇರಿಲ್ ಮಿಚೆಲ್ (134) ಮತ್ತು ನಾಯಕ ಕೇನ್ ವಿಲಿಯಮ್ಸನ್ (69) ವಿಕೆಟ್ ನಿಲ್ಲಿಸಿ ತಂಡಕ್ಕೆ ಆಸರೆ ಆದರು. ಇದರಿಂದ ಕಿವೀಸ್ ಪಡೆಯಲ್ಲಿ ಗೆಲುವಿನ ಆಸೆ ಚಿಗುರಿತು. ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ನರ್ಗಳು ರನ್ಗೆ ಕಡಿವಾಣ ಹಾಕಿದರೇ ಹೊರತು ವಿಕೆಟ್ ತೆಗೆಯುವಲ್ಲಿ ಯಶಸ್ವಿ ಆಗಲಿಲ್ಲ. ಇದು ಭಾರತದ ಹಿನ್ನಡೆಗೆ ಕಾರಣವಾಯಿತು.
ಮಧ್ಯಮ ಓವರ್ಗಳ ರನ್ ಕಡಿವಾಣದಿಂದಾಗಿ ಕೊನೆಯ ಓವರ್ಗಳಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಒತ್ತಡ ಉಂಟಾಯಿತು. ಇದರಿಂದ ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಿದ ಆಟಗಾರರು ವಿಕೆಟ್ ಕಳೆದುಕೊಂಡರು. ಕೊನೆಯಲ್ಲಿ ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್ ರನ್ ಗಳಿಸುವುದಿರಲಿ ವಿಕೆಟ್ ರಕ್ಷಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಇದರಿಂದ ನ್ಯೂಜಿಲೆಂಡ್ 48.5 ಓವರ್ಗೆ 327ರನ್ ಗಳಿಗೆ ಸರ್ವಪತನ ಕಂಡಿತು.
ಭಾರತದ ಯಾವುದೇ ಬೌಲರ್ಗಳು ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಗದಿದ್ದಾಗ ಶಮಿ ಮಾತ್ರ ಎದುರಾಳಿಗಳನ್ನು ಕಾಡಿದರು.
9.5 ಓವರ್ ಮಾಡಿದ ಶಮಿ 5.80 ಎಕಾನಮಿಯಲ್ಲಿ ಬೌಲಿಂಗ್ ಮಾಡಿ 57 ರನ್ ಕೊಟ್ಟು 7 ವಿಕೆಟ್ ಕಬಳಿಸಿದರು. ಏಕದಿನ ಇತಿಹಾಸದಲ್ಲೇ 7 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಖ್ಯಾತಿಗೆ ಶಮಿ ಒಳಗಾದರು. ಅಲ್ಲದೇ ಶಮಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.