Saturday, 14th December 2024

ಅಫ್ಘಾನಿಸ್ತಾನ ವಿರುದ್ಧದ ಸ್ವದೇಶಿ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ ಇಂದು

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಸ್ವದೇಶಿ ಸರಣಿಗೆ ಭಾರತೀಯ ಆಯ್ಕೆಗಾರರು ತಂಡವನ್ನು ಶುಕ್ರವಾರ ಪ್ರಕಟ ಮಾಡಲಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪುನಃ ಭಾರತಕ್ಕಾಗಿ ಟಿ20 ಕ್ರಿಕೆಟ್ ಆಡಲು ಉತ್ಸುಕರಾಗಿದ್ದಾರೆ ಎಂದು ವರದಿಗಳಿವೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡರೆ, ಟಿ20 ಸರಣಿಯನ್ನು ಸಮಬಲ ಸಾಧಿಸಿತು. ಕೊನೆಯದಾಗಿ ನಡೆದ ಎರಡು ಟೆಸ್ಟ್ ಪಂದ್ಯ ಕೂಡ 1-1 ಅಂತರದಿಂದ ಡ್ರಾ ಆಯಿತು. ಭಾರತೀಯ ಪುರುಷರ ಕ್ರಿಕೆಟ್ ತಂಡವು ಇದೀಗ ಮೂರು ಪಂದ್ಯಗಳ ಟಿ20I ಸರಣಿಯಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲು ಸಜ್ಜಾಗಬೇಕಿದೆ. ಸರಣಿಯು ಭಾರತದಲ್ಲಿ ನಡೆಯಲಿದ್ದು, ಜ.11 ರಂದು ಮೊಹಾಲಿಯಲ್ಲಿ, ಎರಡನೇ ಪಂದ್ಯ ಜ.14 ರಂದು ಇಂದೋರ್‌ನಲ್ಲಿ ಮತ್ತು ಅಂತಿಮ ಪಂದ್ಯ ಜ.17 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಇದೀಗ 2024ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಈ ಜೋಡಿ ಪುನರಾಗಮನಕ್ಕೆ ಸಿದ್ಧವಾಗಿದೆ. ರೋಹಿತ್ ಮತ್ತು ಕೊಹ್ಲಿ ಅವರು ಚುಟುಕು ಕ್ರಿಕೆಟ್​ನ ಆಯ್ಕೆಗೆ ಲಭ್ಯವಿದ್ದಾರೆ ಎಂದು ಬಿಸಿಸಿಐಗೆ ತಿಳಿಸಿದ್ದಾರೆ. ಹೀಗಾಗಿ, ಇವರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20I ಗಳಿಗೆ ಆಯ್ಕೆ ಮಾಡಲಿದ್ದಾರಂತೆ. ಅಫ್ಘಾನಿಸ್ತಾನ ವಿರುದ್ಧದ ಸ್ವದೇಶಿ ಸರಣಿಯು ಟಿ20 ವಿಶ್ವಕಪ್‌ಗೆ ಮೊದಲು ಭಾರತದ ಕೊನೆಯ ದ್ವಿಪಕ್ಷೀಯ ಟಿ20I ಸರಣಿಯಾಗಿದೆ. ಟಿ20 ವಿಶ್ವಕಪ್ ಈ ವರ್ಷದ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯಲಿದೆ.