ತಿರುವನಂತಪುರಂ: ಗ್ರೀನ್‌ಫೀಲ್ಡ್ ಇಂಟರ್ ನ್ಯಾಷನಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 44 ರನ್ಗಳಿಂದ ಜಯ ಗಳಿಸಿದೆ.
ಇದರೊಂದಿಗೆ, ಟೀಂ ಇಂಡಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 235 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ಟೀಂ ಇಂಡಿಯಾ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ (53 ರನ್, 25 ಎಸೆತ), ಋತುರಾಜ್ ಗಾಯಕವಾಡ್ (58 ರನ್, 43 ಎಸೆತ) ಹಾಗೂ ಇಶಾನ್ ಕಿಶನ್ (52 ರನ್, 32 ಎಸೆತ) ಭರ್ಜರಿ ಬ್ಯಾಟಿಂಗ್ನಿಂದ ಆಸೀಸ್ ಬೌಲರ್ಗಳು ಬಸವಳಿದರು. ಕೊನೆಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ (19 ರನ್, 10 ಎಸೆತ) ಮತ್ತು ರಿಂಕು ಸಿಂಗ್ (31 ರನ್, 9 ಎಸೆತ) ಸ್ಫೋಟಕ ಬ್ಯಾಟಿಂಗ್ನಿಂದ ಭಾರತ ತಂಡ ಬೃಹತ್ ಗುರಿ ನೀಡಿತ್ತು.
ಭಾರತದ 235 ರನ್ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ಆರಂಭದಲ್ಲೇ ಪ್ರಮುಖ ಆಟಗಾರರ ವಿಕೆಟ್ ಕಳೆದುಕೊಂಡಿತು. ಆರಂಭದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ಣೋಯಿ ಬೌಲಿಂಗ್ನಲ್ಲಿ ಕ್ರಮವಾಗಿ ಸ್ವಿವನ್ ಸ್ಮಿತ್ (19), ಮ್ಯಾಥ್ಯೂವ್ ಶಾರ್ಟ್ (19) ವಿಕೆಟ್ ಪಡೆದರು. ಬಳಿಕ ಬಂದ ಜೋಶ್ ಇಂಗ್ಲಿಸ್ (2), ಗ್ಲೇನ್ ಮ್ಯಾಕ್ಸವೆಲ್ (12) ವಿಕೆಟ್ಗಳನ್ನು ಪ್ರಸಿದ್ಧ ಕೃಷ್ಣ ಮತ್ತು ಅಕ್ಷರ್ ಪಟೆಲ್ ಕಬಳಿಸಿ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೊಯಿನಿಸ್ (45 ರನ್, 25 ಎಸೆತ), ಟಿಮ್ ಡೇವಿಡ್ (37 ರನ್, 22 ಎಸೆತ) ಮತ್ತು ನಾಯಕ ಮ್ಯಾಥ್ಯೂ ವೇಡ್ (42 ರನ್, 23 ಎಸೆತ) ಕೆಲಕಾಲ ಭರವಸೆ ಮೂಡಿಸಿದ್ದರು.
ಟೀಂ ಇಂಡಿಯಾದ ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ಣೋಯಿ ತಲಾ ಮೂರು ವಿಕೆಟ್ ಪಡೆದು ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಿದರು. ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್ ಮತ್ತು ಮುಕೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು. ಆಸ್ಟ್ರೇಲಿಯಾ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್ಗಳಿಸಿ ಶರಣಾಯಿತು. ಭಾರತ 44 ರನ್ಗಳಿಂದ ಜಯಿಸಿ ಸರಣಿಯಲ್ಲಿ ಮೇಲುಗೈ ಸಾಧಿಸಿತು.