ಮುಂಬೈ: ವಿಜಯ್ ಹಜಾರೆ ಟೂರ್ನಿಗೆ(Vijay Hazare Trophy) ಪ್ರಕಟಗೊಂಡ ಮುಂಬೈ ತಂಡದಲ್ಲಿ ಸ್ಥಾನ ಸಿಗದ ಬೇಸರದಲ್ಲಿ ಪೃಥ್ವಿ ಶಾ(Prithvi Shaw) ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ‘ನಾನು ಇನ್ನು ಏನೇನು ನೋಡಬೇಕು. ದೇವರೇ ಹೇಳುʼ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿರುವ ಪೃಥ್ವಿ ಶಾ, ‘ಓ ದೇವರೇ ನಾನು ಇನ್ನೇನೆಲ್ಲ ನೋಡಬೇಕು ಹೇಳು. 65 ಇನಿಂಗ್ಸ್ಗಳಲ್ಲಿ 3399 ರನ್ಗಳನ್ನು 55.7 ಸರಾಸರಿಯಲ್ಲಿ ಗಳಿಸಿರುವೆ. ವಿಜಯ್ ಹಜಾರೆ ಟೂರ್ನಿಯಲ್ಲಿ 126ರ ಸ್ಟ್ರೈಕ್ ರೇಟ್ ಇದೆ. ಇಷ್ಟಾದರೂ ನಾನು ಉತ್ತಮವಲ್ಲ. ಇಷ್ಟಾದರೂ ನಾನು ನಂಬಿಕೆ ಕಳೆದುಕೊಂಡಿಲ್ಲ. ಕೆಲವರಾದರೂ ನನ್ನ ಮೇಲೆ ನಂಬಿಕೆ ಇಟ್ಟಿರುವ ವಿಶ್ವಾಸವಿದೆ. ನಾನು ಮರಳಿ ಬರುವುದು ಖಚಿತ. ಓಂ ಸಾಯಿ ರಾಮ್’ ಎಂದು ಬರೆದು ತೀವ್ರ ನೋವು ಹೊರ ಹಾಕಿದ್ದಾರೆ.
ಡಿ. 21ರಿಂದ ಆರಂಭವಾಗುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಮುಂಬೈ ತಂಡಕ್ಕೆ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಿಲ್ಲ. ಇದರಿಂದಾಗಿ ಅವರು ಬೇಸರಗೊಂಡಿದ್ದಾರೆ. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಿದ್ದ ಪೃಥ್ವಿ ಶಾ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು.ಇದಕ್ಕೂ ಮುನ್ನ ರಣಜಿ ಟ್ರೋಫಿ ಟೂರ್ನಿಯಲ್ಲಿ ಶಿಸ್ತು ಉಲ್ಲಂಘನೆ ಕಾರಣಕ್ಕೆ ಕೆಲವು ಪಂದ್ಯಗಳಿಂದ ಅವರನ್ನು ಕೈಬಿಡಲಾಗಿತ್ತು.
ಐಪಿಎಲ್ನಲ್ಲಿಯೂ ಅವರನ್ನು ಯಾವುದೇ ತಂಡವೂ ಖರೀದಿಸಿಲ್ಲ. 75 ಲಕ್ಷ ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿ ಶಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ್ದ ಪೃಥ್ವಿ ಶಾ ಹಲವು ಪಂದ್ಯಗಳಲ್ಲಿ ಶೂನ್ಯ ಸುತ್ತಿ ಕಳಪೆ ಪ್ರದರ್ಶನ ತೋರಿದ್ದರು. ಇದುವರೆಗೂ 79 ಐಪಿಎಲ್ ಪಂದ್ಯವನ್ನಾಡಿರುವ ಪೃಥ್ವಿ ಶಾ 1892 ರನ್ ಬಾರಿಸಿದ್ದಾರೆ. ಈ ವೇಳೆ 14 ಅರ್ಧಶತಕ ಗಳಿಸಿದ್ದಾರೆ.
ಇದನ್ನೂ ಓದಿ Prithvi Shaw: ವಿಜಯ್ ಹಝಾರೆ ಟ್ರೋಫಿ ಮುಂಬೈ ತಂಡದಿಂದಲೂ ಪೃಥ್ವಿ ಶಾ ಔಟ್!
ಮುಂಬೈ ತಂಡ
ಶ್ರೇಯಸ್ ಅಯ್ಯರ್ (ನಾಯಕ), ಆಯುಷ್ ಮ್ಹಾತ್ರೆ, ಆಂಗ್ಕ್ರಿಶ್ ರಘುವಂಶಿ, ಜಯ್ ಬಿಸ್ತಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ಸಿದ್ಧೇಶ್ ಲಾಡ್, ಹಾರ್ದಿಕ್ ತಮೋರ್ (ವಿ.ಕೀ), ಪ್ರಸಾದ್ ಪವಾರ್ (ವಿ.ಕೀ), ಅಥರ್ವ ಅಂಕೋಲೆಕರ್, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ರಾಯ್ಸ್ಟನ್ ಡಯಾಸ್, ಜುನೆದ್ ಖಾನ್, ಹರ್ಷ್ ತನ್ನಾ, ವಿನಾಯಕ್ ಭೋಯ್ರ್