Monday, 16th September 2024

ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಟೆಸ್ಟ್‌ ರನ್‌: ರೂಟ್‌ ದಾಖಲೆ

Joe Root

ಅಡಿಲೇಡ್‌: ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಪ್ರಸಕ್ತ ವರ್ಷದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಜೋ ರೂಟ್‌ ಭಾರತೀಯ ಬ್ಯಾಟಿಂಗ್ ದಿಗ್ಗಜರಾದ ಸಚಿನ್‌ ತೆಂಡೂ ಲ್ಕರ್‌ ಹಾಗೂ ಸುನೀಲ್‌ ಗವಾಸ್ಕರ್‌ ಅವರ ದಾಖಲೆ ಮುರಿದರು. ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್‌ ಪಂದ್ಯಗಳಲ್ಲಿ ಅತ್ಯಧಿಕ ರನ್‌ ಗಳಿಸಿದ ಐದನೇ ಆಟಗಾರರಾಗಿದ್ದಾರೆ.

ಆಶಸ್ ಸರಣಿಯ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅವರು 1563 ರನ್‌ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದಾರೆ.

ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗೆ 473 ರನ್ ಗಳಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಡಿಕ್ಲೇರ್ ಮಾಡಿಕೊಂಡಿತು. ಆರಂಭಿಕರಾದ ಹಸೀಬ್ ಹಮೀದ್ (6), ರೋರಿ ಬರ್ನ್ಸ್ (4) ವಿಫಲವಾದರೂ ಡೇವಿಡ್ ಮಲಾನ್, ಜೋ ರೂಟ್ ಶತಕದ ಜೊತೆಯಾಟ ನಡೆಸಿ ಇನ್ನಿಂಗ್ಸ್ ಕಟ್ಟಿದರು.

2002ರಲ್ಲಿ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್ 1,481 ರನ್‌ ಗಳಿಸಿದ್ದರು. ವಾನ್‌ ದಾಖಲೆ ಮುರಿದಿರುವ ಜೋ ರೂಟ್‌, ಭಾರತೀಯ ಸುನೀಲ್ ಗವಾಸ್ಕರ್‌(1,555 ರನ್‌, 1979ರ ವರ್ಷ) ಹಾಗೂ 2010ರ ವರ್ಷದಲ್ಲಿ 1,562 ರನ್‌ ಗಳಿಸಿದ್ದ ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಿದ್ದಾರೆ.

ಆರಂಭಿಕ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ ರೂಟ್‌, ರಿಕ್ಕಿ ಪಾಂಟಿಂಗ್‌, ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ ಹಾಗೂ ಜಸ್ಟಿನ್‌ ಲ್ಯಾಂಗರ್ ಅವರ ದಾಖಲೆಯನ್ನು ಮುರಿದಿದ್ದರು.

ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್:
ಮೊಹಮ್ಮದ್ ಯೂಸುಫ್ (2006) – 1788 ರನ್
ವಿವಿಯನ್ ರಿಚರ್ಡ್ಸ್ (1976) – 1710 ರನ್
ಗ್ರೇಮ್ ಸ್ಮಿತ್ (2008) – 1656
ಮೈಕೆಲ್ ಕ್ಲಾರ್ಕ್ (2012) – 1595
ಜೋ ರೂಟ್ (2021) – 1563 (ಔಟಾಗದೆ)
ಸಚಿನ್ ತೆಂಡೂಲ್ಕರ್ (2010) – 1562 ರನ್
ಸುನಿಲ್ ಗವಾಸ್ಕರ್ (1979) – 1555 ರನ್