ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡವನ್ನು ಕಳೆದ ನಾಲ್ಕು ವರ್ಷಗಳಿಂದ ಮುನ್ನಡೆಸುತ್ತಿದ್ದ ಟಿಮ್ ಪೈನ್ ಅತ್ಯಂತ ಕೆಟ್ಟ ರೀತಿಯಲ್ಲಿ ನಾಯಕತ್ವವನ್ನು ತ್ಯಜಿಸಿದ್ದಾರೆ. ವಿವಾದವೊಂದಕ್ಕೆ ಸಿಲುಕಿರುವ ಆಸಿಸ್ ನಾಯಕ ದೊಡ್ಡ ಸರಣಿ ಸನಿಹ ದಲ್ಲಿರುವಾಗಲೇ ನಾಯಕತ್ವ ತ್ಯಜಿಸಿದ್ದಾರೆ.
ಸಹೋದ್ಯೋಗಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟಿಮ್ ಪೈನ್ ವಿರುದ್ಧ ತನಿಖೆ ನಡೆಸುತ್ತಿದೆ. ಪ್ರಕರಣದ ಕಾರಣದಿಂದಾಗಿ ಟಿಮ್ ಪೈನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
2017ರಲ್ಲಿ ಕ್ರಿಕೆಟ್ ಟಾಸ್ಮೇನಿಯಾದ ಉದ್ಯೋಗಿ ಜೊತೆಗಿನ ಈ ಪ್ರಕರಣ ಬಹಿರಂಗವಾಗಿತ್ತು. ಹೀಗಾಗಿ ಈ ರಾಜೀನಾಮೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಟಿಮ್ ಪೈನ್.
ಮುಂದಿನ ಆಶಸ್ ಸರಣಿಯಲ್ಲಿ ಸದ್ಯ ಉಪನಾಯಕನಾಗಿರುವ ಪ್ಯಾಟ್ ಕಮಿನ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಹೀಗಾದಲ್ಲಿ 65 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡವನ್ನು ವೇಗದ ಬೌಲರ್ ಒಬ್ಬರು ತಂಡವನ್ನು ಮುನ್ನಡೆಸಿದಂತಾಗುತ್ತದೆ. ಆಸಿಸ್ ನಾಯಕತ್ವ ಪ್ಯಾಟ್ ಕಮ್ಮಿನ್ಸ್ ಹೆಗಲೇರಿದರೆ ತಂಡವನ್ನು ನಾಯಕನಾಗಿ ಮುನ್ನಡೆಸುವ 47ನೇ ಆಟಗಾರ ಎನಿಸಲಿದ್ದಾರೆ.