ನವದೆಹಲಿ: ‘ಸಾರ್ವತ್ರಿಕ ಸ್ಥಾನಗಳ ಅರ್ಹತೆ’ ಪದ್ಧತಿಯಡಿಯಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ಮಾನಾ ಪಟೇಲ್ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ನಾಮನಿರ್ದೇಶನಗೊಂಡಿದ್ದಾರೆ.
ಭಾರತ ಈಜು ಫೆಡರೇಷನ್ (ಎಸ್‌ಎಫ್‌ಐ) ಮಂಗಳವಾರ ಇವರಿಬ್ಬರ ಹೆಸರುಗಳನ್ನು ಶಿಫಾರಸು ಮಾಡಿದೆ.
ಸಾಮಾನ್ಯ ಅರ್ಹತಾ ಪ್ರಕ್ರಿಯೆ ಮೂಲಕ ಯಾರೂ ಆಯ್ಕೆಯಾಗದಿದ್ದಾಗ, ಹೆಚ್ಚು ಫಿನಾ ಪಾಯಿಂಟ್ಸ್ ಹೊಂದಿರುವ ತಲಾ ಒಬ್ಬ ಪುರುಷ ಹಾಗೂ ಮಹಿಳಾ ಈಜುಪಟುವನ್ನು ಶಿಫಾರಸು ಮಾಡುವ ಅವಕಾಶ ರಾಷ್ಟ್ರೀಯ ಫೆಡರೇಷನ್‌ಗೆ ಇತ್ತು. ಒಲಿಂಪಿಕ್ಸ್ ‘ಬಿ’ ಅರ್ಹತೆಯ ಪಾಯಿಂಟ್ಸ್‌ಗಳನ್ನು ಈ ಆಯ್ಕೆಗೆ ಪರಿಗಣಿಸಲಾಗುತ್ತದೆ.
100 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಸ್ಪರ್ಧಿಸುವ ಶ್ರೀಹರಿ ಮತ್ತು ಮಾನಾ ಕ್ರಮವಾಗಿ 863 ಮತ್ತು 735 ಪಾಯಿಂಟ್ಸ್ ಗಳಿಸಿ ದ್ದಾರೆ.
ಮಾನಾ ಅವರನ್ನು ಹೊರತುಪಡಿಸಿ, ಭಾರತದ ಯಾವುದೇ ಮಹಿಳಾ ಈಜುಪಟುಗಳು ‘ಬಿ’ ಅರ್ಹತೆ ಗಳಿಸಿಲ್ಲವಾದ್ದರಿಂದ ಅವರು ಟೋಕಿಯೊಗೆ ತೆರಳುವುದು ಖಚಿತವಾಗಿದೆ. ಆದರೆ ಶ್ರೀಹರಿ ಅವರು ಒಲಿಂಪಿಕ್ಸ್ ಪ್ರವೇಶ ಇನ್ನೂ ದೃಢಪಟ್ಟಿಲ್ಲ. ಏಕೆಂದರೆ ಶ್ರೀಹರಿ ಸೇರಿ ಭಾರತದ ಆರು ಮಂದಿ ‘ಬಿ’ ಅರ್ಹತೆ ಗಳಿಸಿದ್ದಾರೆ.
ಹೀಗಾಗಿ, ‘ಎ’ ಅರ್ಹತೆ ಗಳಿಸುವ ಈಜುಪಟು ಟೋಕಿಯೊಗೆ ತೆರಳುವ ಅವಕಾಶ ಪಡೆಯುತ್ತಾರೆ. ಆಗ ಸಾರ್ವತ್ರಿಕ ಅರ್ಹತಾ ವ್ಯವಸ್ಥೆಯಡಿಯ ಆಯ್ಕೆಯನ್ನು ರದ್ದು ಮಾಡಲಾಗುತ್ತದೆ. ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ವೀರ್‌ಧವಳ್ ಖಾಡೆ, ಆರ್ಯನ್ ಮಕೀಜಾ, ಕುಶಾಗ್ರ ರಾವತ್, ಅದ್ವೈತ್ ಪಾಗೆ ಹಾಗೂ ಸಾಜನ್ ಪ್ರಕಾಶ್ ಒಲಿಂಪಿಕ್ಸ್ ‘ಬಿ’ ಅರ್ಹತೆ ಗಳಿಸಿದವರು.