ದುಬೈ: ಅಂಡರ್ 19 ತಂಡಗಳ ಐಸಿಸಿ ಏಕದಿನ ಏಷ್ಯಾಕಪ್(U19 Asia Cup 2024) ಟೂರ್ನಿಯಲ್ಲಿ ಭಾರತ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇಂದು ನಡೆದು ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ಯುಎಇ(India vs UAE) ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿ ಸೆಮಿಗೆ ಲಗ್ಗೆಯಿಟ್ಟಿತು. ಡಿ.6 ರಂದು ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಯುಎಇ 44 ಓವರ್‌ಗಳಲ್ಲಿ 137 ರನ್‌ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ 16.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 143 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ʼಬಿʼ ಗುಂಪಿನಲ್ಲಿ ಆಡಿದ ಎಲ್ಲ ಪಂದ್ಯವನ್ನು ಗೆದ್ದ ಸಾಧನೆ ಮಾಡಿತು.
ಇದನ್ನೂ ಓದಿ Vaibhav Suryavanshi: ವಯಸ್ಸಿನ ವಿವಾದಕ್ಕೆ ಸಿಲುಕಿದ ವೈಭವ್ ಸೂರ್ಯವಂಶಿ
ಕಳೆದೆರಡು ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ 13 ವರ್ಷದ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸುವ ಮೂಲಕ ಗಮನಸೆಳೆದರು. 46 ಎಸೆತಗಳಿಂದ 6 ಸೊಗಸಾದ ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 76* ರನ್ ಬಾರಿಸಿದರು. ಇವರ ಜತೆಗಾರ ಆಯುಷ್ ಮ್ಹಾತ್ರೆ ತಲಾ 4 ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಅಜೇಯ 67 ರನ್ ಚಚ್ಚಿದರು. ಇತ್ತೀಚೆಗೆ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ(IPL auction) ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡಕ್ಕೆ 1.10 ಕೋಟಿ ರೂ. ಮೊತ್ತಕ್ಕೆ ಬಿಕರಿಯಾಗಿದ್ದರು.
ಮೊದಲು ಬ್ಯಾಟಿಂಗ್ ನಡೆಸಿದ ಯುಎಇ ಪರ ರಾಯನ್ ಖಾನ್(35), ಅಕ್ಷತ್ ರೈ(26) ಸಣ್ಣ ಮಟ್ಟದ ಬ್ಯಾಟಿಂಗ್ ಹೋರಾಟ ನಡೆಸಿ ತಂಡದ ಮೊತ್ತವನ್ನು ನೂರರ ಗಡಿ ದಾಡಿಸಿದರು. ಭಾರತ ಪರ ಘಾತಕ ಬೌಲಿಂಗ್ ದಾಳಿ ನಡೆದಿದ ಯುಧಾಜಿತ್ ಗುಹಾ 7 ಓವರ್‌ಗೆ ಕೇವಲ 15 ರನ್ ಬಿಟ್ಟುಕೊಟ್ಟು 3 ವಿಕೆಟ್ ಕೆಡವಿದರು. ಉಳಿದಂತೆ ಚೇತನ್ ಶರ್ಮಾ ಮತ್ತು ಹಾರ್ದಿಕ್ ರಾಜ್ ತಲಾ 2 ವಿಕೆಟ್ ಕಿತ್ತರು.