Monday, 16th September 2024

US Open 2024: ವಿಶ್ವ ನಂ.3 ಅಲ್ಕರಾಜ್‌ಗೆ ಆಘಾತಕಾರಿ ಸೋಲುಣಿಸಿದ 74ನೇ ಶ್ರೇಯಾಂಕದ ಬೋಟಿಕ್

US Open 2024

ನ್ಯೂಯಾರ್ಕ್‌: ಯುಎಸ್‌ ಓಪನ್‌ ಟೆನಿಸ್‌(US Open 2024) ಕೂಟದಲ್ಲಿ ಮಾಜಿ ಚಾಂಪಿಯನ್‌,  21 ವರ್ಷದ ಸ್ಪೇನ್‌ನ ಯುವ ತಾರೆ ಕಾರ್ಲೊಸ್‌ ಅಲ್ಕರಾಜ್‌(Carlos Alcaraz) ಆಘಾತಕಾರಿ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನಲ್ಲಿ ಅಲ್ಕರಾಜ್‌ ಅವರು ತನಗಿಂತ ಕೆಳಗಿನ ಶ್ರೇಯಾಂಕಿತ ನೆದರ್ಲೆಂಡ್ಸ್‌ನ ಬೋಟಿಕ್ ವ್ಯಾನ್ ಡಿ ಝಾಂಡ್‌ಸ್ಚುಲ್ಪ್(Botic van de Zandschulp) ವಿರುದ್ಧ 6-1, 7-5, 6-4 ನೇರ ಸೆಟ್‌ಗಳ ಅಂತರದಲ್ಲಿ ಪರಾಭವಗೊಂಡರು.

ಅಜೇಯ ಗೆಲುವಿನ ಓಟಕ್ಕೆ ತೆರೆ

ವಿಶ್ವ ನಂ.3 ರ‍್ಯಾಂಕ್‌ನ ಅಲ್ಕರಾಜ್ ಅವರು ವಿಶ್ವ ನಂ. 74ನೇ ರ‍್ಯಾಂಕ್‌ನ ಬೋಟಿಕ್ ವ್ಯಾನ್ ಡಿ ಅವರ ಆಕ್ರಮಣಕಾರಿ ಆಟದ ಮುಂದೆ ಸಂಪೂಣ ಮಂಕಾದರು. ಈ  ಪಂದ್ಯ ಕೇವಲ ಒಂದು ಗಂಟೆ 19 ನಿಮಿಷಕ್ಕೆ ಮುಕ್ತಾಯ ಕಂಡಿತು. ಈ ಹಿಂದೆ 24 ಬಾರಿಯ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ಸರ್ಬಿಯಾದ ನೊವಾಕ್‌ ಜೋಕೊವಿಕ್‌ ಅವರನ್ನು ಹಲವು ಬಾರಿ ಮಣಿಸಿ ಪ್ರಶಸ್ತಿ ಗೆದ್ದಿದ್ದ ಅಲ್ಕರಾಜ್‌ಗೆ ಈ ಸೋಲು ಅರಗಿಸಿಕೊಳ್ಳಲಾಗದ ಹೊಡೆತ ನೀಡಿದಂತಾಗಿದೆ.

https://youtu.be/TztyB9_MEVo

ಸೋಲಿನೊಂದಿಗೆ ಪ್ರಸಕ್ತ ಋತುವಿನಲ್ಲಿ ಮೂರನೇ ಹಾಗೂ ಒಟ್ಟಾರೆಯಾಗಿ ವೃತ್ತಿಜೀವನದ ಐದನೇ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಅಲ್ಕರಾಜ್ ಅವರ ಕನಸು ಭಗ್ನಗೊಂಡಿದೆ. ಜತೆಗೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಸತತ 15ನೇ ಗೆಲುವು ದಾಖಲಿಸಿದ್ದ ಅಲ್ಕರಾಜ್ ಅಜೇಯ ಗೆಲುವಿನ ಓಟಕ್ಕೆ ತೆರೆ ಬಿದ್ದಿದೆ. 2022ರಲ್ಲಿ ಅಲ್ಕರಾಜ್ ಅವರು ಅಮೆರಿಕ್ ಓಪನ್ ಚಾಂಪಿಯನ್ ಆಗಿದ್ದರು.

ಅಲ್ಕರಾಜ್‌ಗೆ ಸೋಲುಣಿಸಿದ ಬೋಟಿಕ್ ಸದ್ಯ ಈ ಬಾರಿಯ ಯುಎಸ್‌ ಓಪನ್‌ ಕೂಟದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. 1991ರ ಬಳಿಕ ಅಗ್ರ ಮೂರರ ಒಳಗೊನ ಶ್ರೇಯಾಂಕಿತ ಆಟಗಾರರನ್ನು ಮಣಿಸಿದ ಡಚ್‌ನ ಮೊದಲ ಆಟಗಾರ ಎನಿಸಿದ್ದಾರೆ. ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಬೋಟಿಕ್, ‘ಈ ಗೆಲುವನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ಅರ್ಥರ್ ಸ್ಟೇಡಿಯಂನಲ್ಲಿ ಕೆಲವೊಂದು ನಂಬಲಾಗದ ರೀತಿಯಲ್ಲಿ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದೇನೆ.

https://x.com/usopen/status/1829363653553836311

2021ರ ವಿಂಬಲ್ಡನ್ ಟೂರ್ನಿಯಲ್ಲಿ ಅಲ್ಕರಾಜ್ ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದರು. ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ಅಮೆರಿಕನ್ ಓಪನ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಸೋಲು ಕಂಡು ದ್ವಿತೀಯ ಸುತ್ತಿನಲ್ಲೇ ನಿರ್ಗಮನ ಕಂಡಿದ್ದಾರೆ. ಅಲ್ಕರಾಜ್ ಸೋಲಿನಿಂದ ದಾಖಲೆ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಜೊಕೋವಿಕ್‌ ಹಾದಿ ಸುಗಮಗೊಂಡಿದೆ. ಹಾಲಿ ಚಾಂಪಿಯನ್‌ ನೋವಾಕ್‌ ಜೊಕೋವಿಕ್‌ ಮತ್ತು ಜರ್ಮನಿಯ ಅಲೆಕ್ಸಾಂಡರ್‌ ಜ್ವರೇವ್‌ ಅವರು ಸದ್ಯ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

Leave a Reply

Your email address will not be published. Required fields are marked *