Sunday, 15th December 2024

US Open: ಸಬಲೆಂಕಾ-ಪೆಗುಲಾ ಫೈನಲ್‌ ಫೈಟ್‌

US Open

ನ್ಯೂಯಾರ್ಕ್‌: ಯುಎಸ್ ಓಪನ್(US Open) 2024 ರ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವದ ನಂ.2 ಅರೀನಾ ಸಬಲೆಂಕಾ(Aryna Sabalenka) ಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ತಡರಾತ್ರಿ ನಡೆಯುವ ಫೈನಲ್‌(US Open final) ಪಂದ್ಯದಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ(J. Pegula) ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಸೆಮಿ ಫೈನಲ್‌ನ ಅತ್ಯಂತ ಜಿದ್ದಾಜಿದ್ದಿನ ಪಂದ್ಯದಲ್ಲಿ ಸಬಲೆಂಕಾ ಸ್ಥಳೀಯ ಆಟಗಾರ್ತಿ ಎಮ್ಮಾ ನವಾರೊ ಅವರನ್ನು 6-3, 7-6 (7-2) ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಈ ಮೂಲಕ ಸತತವಾಗಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಕಳೆದ ವರ್ಷವೂ ಸಬಲೆಂಕಾ ಫೈನಲ್‌ ಪ್ರವೇಶಿಸಿದ್ದರು. ಆದರೆ, ಕೋಕೊ ಗಾಫ್ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು. ಇದೀಗ ಮತ್ತೆ ಫೈನಲ್‌ ಪ್ರವೇಶಿಸಿರುವ ಅವರು ಚೊಚ್ಚಲ ಟ್ರೋಫಿಯ ನಿರೀಕ್ಷೆಯಲ್ಲಿದ್ದಾರೆ. ಸಬಲೆಂಕಾ ಈ ಹಿಂದೆ ಎರಡು ಬಾರಿ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು.

ಎಮ್ಮಾ ನವಾರೊ ಅವರು ಈ ಬಾರಿ ನಾಲ್ಕನೇ ಸುತ್ತಿನ ಹೋರಾಟದಲ್ಲಿ ಹಾಲಿ ಚಾಂಪಿಯನ್‌ ಗಾಫ್ ಅವರ ಆಟಕ್ಕೆ ಬ್ರೇಕ್‌ ಹಾಕಿದ್ದರು. ಹೀಗಾಗಿ ನವಾರೊ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಅವರ ಗೆಲುವಿನ ಓಟ ಸೆಮಿ ಫೈನಲ್‌ಗೆ ಅಂತ್ಯ ಕಂಡಿದೆ.

ಇದನ್ನೂ ಓದಿ US Open: ಸೆಮಿಫೈನಲ್‌ಗೆ ಸಿನ್ನರ್‌; ಸ್ವಿಯಾಟೆಕ್‌ಗೆ ಸೋಲಿನ ಆಘಾತ

ಸಬಲೆಂಕಾ ಎದುರಾಳಿಯಾಗಿರುವ ಅಮೆರಿಕದ ಜೆಸ್ಸಿಕಾ ಪೆಗುಲಾ ವಿಶ್ವದ ನಂಬರ್‌ 1 ಖ್ಯಾತಿಯ ಇಗಾ ಸ್ವಿಯಾಟೆಕ್‌ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ ಹಂತಕ್ಕೇರಿದ್ದರು. ಸೆಮಿಯಲ್ಲಿ ಕರೋಲಿನಾ ಮುಚೋವಾ ವಿರುದ್ಧ ಮೂರು ಸೆಟ್‌ಗಳ ಹೋರಾಟದ ಬಳಿಕ ಗೆಲುವಿನ ನಿಟ್ಟುಸಿರುಬಿಟ್ಟರು. ಗೆಲುವಿನ ಅಂತರ 1-6, 6-4, 6-2. ಮುಚೋವಾ ಬ್ರೆಜಿಲ್‌ನ ಬೀಟ್ರಿಜ್ ಹಡ್ಡಾಡ್ ಮಾಯಾ ಅವರನ್ನು 6-1, 6-4 ರಿಂದ ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದ್ದರು. ಸೆಮಿಯಲ್ಲಿ ಇದೇ ಪ್ರದರ್ಶನ ತೋರುವಲ್ಲಿ ವಿಫಲವಾಗಿ ಸೋಲು ಕಂಡರು. ಕಳೆದ ವರ್ಷ ಕೂಡ ಕರೋಲಿನಾ ಮುಚೋವಾ ಈ ಕೂಟದಲ್ಲಿ ಸೆಮಿಫೈನಲ್‌ ತಲುಪಿದ್ದರು. ಅಲ್ಲಿ ಕೋಕೊ ಗಾಫ್ ವಿರುದ್ಧ ಸೋತಿದ್ದರು. ಈ ಬಾರಿಯೂ ಸೆಮಿ ಹರ್ಡಲ್ಸ್‌ ದಾಟುವಲ್ಲಿ ವಿಫಲರಾದರು.

ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ ಜಾನಿಕ್‌ ಸಿನ್ನರ್‌(Jannik Sinner) ರಶ್ಯದ ಡೇನಿಯಲ್‌ ಮೆಡ್ವಡೇವ್‌(Daniil Medvedev) ಅವರನ್ನು ಮಣಿಸಿ ಚೊಚ್ಚಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ನಾಲ್ಕು ಸೆಟ್‌ಗಳ ಮ್ಯಾರಾಥ್ಯಾನ್‌ ಹೋರಾಟದಲ್ಲಿ ಸಿನ್ನರ್‌ ಅವರು ಮೆಡ್ವಡೇವ್‌ ವಿರುದ್ಧ 6-2, 1-6, 6-1, 6-4 ಅಂತರದಿಂದ ಗೆದ್ದು ಬಂದರು.