Saturday, 23rd November 2024

US Open: ಸೆಮಿಫೈನಲ್‌ಗೆ ಸಿನ್ನರ್‌; ಸ್ವಿಯಾಟೆಕ್‌ಗೆ ಸೋಲಿನ ಆಘಾತ

US Open

ನ್ಯೂಯಾರ್ಕ್‌: ಅಮೆರಿಕನ್‌ ಓಪನ್‌ ಟೆನಿಸ್‌(US Open) ಟೂರ್ನಿಯಲ್ಲಿ ಗುರುವಾರ ಅಚ್ಚರಿಯ ಫಲಿತಾಂಶ ದಾಖಲಾಗಿದೆ. ಮಹಿಳಾ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ, ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌(Iga Swiatek) ಸೋಲು ಕಂಡು ತನ್ನ ಅಭಿಯಾನ ಮುಗಿಸಿದ್ದಾರೆ. ಮತ್ತೊಂದೆಡೆ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ ಜಾನಿಕ್‌ ಸಿನ್ನರ್‌(Jannik Sinner) ರಶ್ಯದ ಡೇನಿಯಲ್‌ ಮೆಡ್ವಡೇವ್‌(Daniil Medvedev) ಅವರನ್ನು ಮಣಿಸಿ ಚೊಚ್ಚಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದರು. ಮೆಡ್ವೆಡೇವ್‌ ಈ ಪಂದ್ಯಾವಳಿಯಲ್ಲಿ ಉಳಿದಿದ್ದ ಏಕೈಕ ಮಾಜಿ ಚಾಂಪಿಯನ್‌ ಆಗಿದ್ದರು. ಆದರೆ ಇವರ ಸೋಲಿನಿಂದ ಇದೀಗ ನೂತನ ಚಾಂಪಿಯನ್‌ ಒಬ್ಬ ಉದಯಿಸಲಿದ್ದಾರೆ.

ಇದೇ ವರ್ಷಾರಂಭದಲ್ಲಿ ನಡೆದಿದ್ದ ಮೊದಲ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್‌ನ ಫೈನಲ್‌ ಪಂದ್ಯದಲ್ಲಿ ಸಿನ್ನರ್‌ ಮತ್ತು ಮೆಡ್ವೆಡೇವ್‌ ಮುಖಾಮುಖಿಯಾಗಿದ್ದರು. ಇಲ್ಲಿ ಜಾನಿಕ್‌ ಸಿನ್ನರ್‌ ಗೆದ್ದು ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಇದೀಗ ಮತ್ತೆ ಅಮೆರಿಕನ್‌ ಓಪನ್‌ನಲ್ಲಿಯೂ ಸಿನ್ನರ್‌ ಮುಂದೆ ಮೆಡ್ವೆಡೇವ್‌ ಮಂಡಿಯೂರಿದರು.

ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಜಾನಿಕ್‌ ಸಿನ್ನರ್‌ ಅಮೆರಿಕದ ಟಾಮಿ ಪೌಲ್‌ ಆಟಕ್ಕೆ 7-6 (7-3), 7-6 (7-5), 6-1ಅಂತರದಿಂದ ಹಿಮ್ಮೆಟ್ಟಿಸಿದ್ದರು. 2021ರ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೇವ್‌ ಪೋರ್ಚುಗಲ್‌ನ ನುನೊ ಬೋಗ್ಸ್ ವಿರುದ್ಧ 6-0, 6-1, 6-3 ಅಂತರದ ಸುಲಭ ಜಯ ಸಾಧಿಸಿದ್ದರು. ಆದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಸಿನ್ನರ್‌ ಮುಂದೆ ಮೆಡ್ವೆಡೇವ್‌ ಆಟ ನಡೆಯಲಿಲ್ಲ. ನಾಲ್ಕು ಸೆಟ್‌ಗಳ ಮ್ಯಾರಾಥ್ಯಾನ್‌ ಹೋರಾಟದಲ್ಲಿ ಸಿನ್ನರ್‌ 6-2, 1-6, 6-1, 6-4 ಅಂತರದಿಂದ ಗೆದ್ದು ಬಂದರು.

ಇದನ್ನೂ ಓದಿ US Open 2024: ಸೆಮಿಯಲ್ಲಿ ಸೋತ ಬೋಪಣ್ಣ ಜೋಡಿ

ಸ್ವಿಯಾಟೆಕ್‌ಗೆ ಸೋಲಿನ ಆಘಾತ

ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯ ನೆಚ್ಚಿನ ಆಟಗಾರ್ತಿಯಾಗಿ ಗೋಚರಿಸಿಕೊಂಡಿದ್ದ ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌ ಸ್ಥಳೀಯ ಆಟಗಾರ್ತಿ ವಿಶ್ವ 6ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ(Jessica Pegula) ವಿರುದ್ಧ 6-2, 6-3 ನೇರ ಗೇಮ್‌ಗಳ ಹೀನಾಯ ಸೋಲು ಕಂಡರು. ಪೆಗುಲಾ ಸೆಮಿಫೈನಲ್‌ ಪಂದ್ಯದಲ್ಲಿ ಕಳೆದ ವರ್ಷದ ಸೆಮಿಫೈನಲಿಸ್ಟ್ ಕರೋಲಿನಾ ಮುಚೋವಾ ಅವರನ್ನು ಎದುರಿಸಲಿದ್ದಾರೆ. ಮುಚೋವಾ ಬ್ರೆಜಿಲ್‌ನ ಬೀಟ್ರಿಜ್ ಹಡ್ಡಾಡ್ ಮಾಯಾ ಅವರನ್ನು 6-1, 6-4 ರಿಂದ ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದ್ದರು.