Thursday, 12th December 2024

US Open: ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಬೋಪಣ್ಣ ಜೋಡಿ

US Open

ನ್ಯೂಯಾರ್ಕ್‌:ಯುಎಸ್‌ ಓಪನ್(US Open) ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ(Rohan Bopanna) ಹಾಗೂ ಅವರ ಜತೆಗಾರ್ತಿ ಇಂಡೋನೇಷ್ಯಾದ ಅಲ್‌ದಿಲಾ ಸುಟ್‌ಜಿದಿ(Aldila Sutjiadi) ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇನ್ನೊಂದು ಗೆಲುವಿನ ಹರ್ಡಲ್ಸ್‌ ದಾಟಿದರೆ ಪ್ರಶಸ್ತಿ ಸುತ್ತಿಗೇರಲಿದ್ದಾರೆ. ಮಂಗಳವಾರ ನಡೆದ ಮೂರು ಸೆಟ್‌ಗಳ ಜಿದ್ದಾಜಿದ್ದಿನ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಬೋಪಣ್ಣ-ಸುಟ್‌ಜಿದಿ ಜೋಡಿ 4ನೇ ಶ್ರೇಯಾಂಕದ ಬಾರ್ಬೊರಾ ಕ್ರೆಜಿಕೋವಾ ಮತ್ತು ಮ್ಯಾಥ್ಯೂ ಎಂಬ್ಡೆನ್‌ ಜೋಡಿಯನ್ನು 7-6 (7-4), 2-6, 10-7 ಅಂತರದದಿಂದ ಹಿಮ್ಮೆಟ್ಟಿಸಿದರು.

ಪ್ರೀ ಕ್ವಾರ್ಟರ್‌ ಪಂದ್ಯದಲ್ಲಿ ಬೋಪಣ್ಣ-ಸುಟ್‌ಜಿದಿ(Bopanna-Sutjiadi)  ಜೋಡಿ  ಆಸ್ಟ್ರೇಲಿಯಾದ ಜಾನ್ ಪಿಯರ್ಸ್ ಹಾಗೂ ಜೆಕ್ ಗಣರಾಜ್ಯದ ಕ್ಯಾತೆರಿನಾ ಸಿನಿಯಾಕೋವಾ ವಿರುದ್ಧ ಮೂರು ಸೆಟ್‌ಗಳ ಹೋರಾಟದಲ್ಲಿ 0-6, 7-6(5), 10-7ರ ಅಂತರದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಕ್ವಾರ್ಟರ್‌ ಫೈನಲ್‌ನಲ್ಲಿಯೂ ಇದೇ ಪ್ರದರ್ಶನ ತೋರುವ ಮೂಲಕ ಇದೀಗ ಸೆಮಿಗೆ ಅರ್ಹತೆ ಪಡೆದಿದ್ದಾರೆ. ಮೊದಲ ಸೆಟ್‌ನಲ್ಲಿ ಟ್ರೈ ಬ್ರೇಕರ್‌ ಮೂಲಕ ಗೆದ್ದ 8ನೇ ಶ್ರೇಯಾಂಕದ  ಬೋಪಣ್ಣ-ಸುಟ್‌ಜಿದಿ ಜೋಡಿ ದ್ವಿತೀಯ ಸೆಟ್‌ನಲ್ಲಿ ಸೋಲು ಕಂಡರು.  ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಬೋಪಣ್ಣ ಜೋಡಿ 10-7 ಅಂತರದಿಂದ ಮೇಲುಗೈ ಸಾಧಿಸಿತು.

ಪುರುಷರ ಡಬಲ್ಸ್‌ನಲ್ಲಿ ಜತೆಯಾಗಿ ಆಡುವ ಎಂಬ್ಡೆನ್‌ ಮತ್ತು ಬೋಪಣ್ಣ ಈ ಪಂದ್ಯದಲ್ಲಿ ಪರಸ್ಪರ ಎದುರಾಳಿಯಾಗಿ ಆಡಿದ್ದು ಪಂದ್ಯದ ವಿಶೇಷತೆ. ಸೋಮವಾರ ನಡೆದಿದ್ದ ಪುರುಷರ ಡಬಲ್ಸ್‌ ಪ್ರೀ ಕ್ವಾರ್ಟರ್‌ ಪಂದ್ಯದಲ್ಲಿ ಇಂಡೋ-ಆಸೀಸ್‌ ಜೋಡಿ ಸೋಲು ಕಂಡಿತ್ತು. ಕಳೆದ ಬಾರಿ ರನ್ನರ್‌ ಅಪ್‌ ಸ್ಥಾನ ಪಡೆದಿತ್ತು. ನಾಳೆ ತಡರಾತ್ರಿ ನಡೆಯುವ ಸೆಮಿ ಫೈನಲ್‌ ಪಂದ್ಯದಲ್ಲಿ ಬೋಪಣ್ಣ-ಸುಟ್‌ಜಿದಿ ಜೋಡಿ ಶ್ರೇಯಾಂಕ ರಹಿತ ಅಮೆರಿಕನ್‌ ಜೋಡಿಯಾದ ಟೇಲರ್ ಟೌನ್ಸೆಂಡ್-ಡೊನಾಲ್ಡ್ ಯಂಗ್‌ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

ಇದನ್ನೂ ಓದಿ Paralympics 2024: ಪ್ಯಾರಿಸ್‌ನಲ್ಲೂ ಬಂಗಾರದೊಂದಿಗೆ ಮಿನುಗಿದ ಸುಮಿತ್‌ ಅಂಟಿಲ್‌

ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿನ್ನರ್‌-ಸ್ವಿಯಾಟೆಕ್‌ 

ಇಂದು(ಮಂಗಳವಾರ)ನಡೆದ ಪುರುಷರ ಸಿಂಗಲ್ಸ್‌ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರರಾದ ಜಾನಿಕ್‌ ಸಿನ್ನರ್‌ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಇಗಾ ಸ್ವಿಯಾಟೆಕ್‌ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಜಾನಿಕ್‌ ಸಿನ್ನರ್‌ ಮುಂದಿನ ಪಂದ್ಯದಲ್ಲಿ ಡ್ಯಾನಿಲ್‌ ಮೆಡ್ವೆಡೇವ್‌ ಸವಾಲು ಎದುರಿಸಲಿದ್ದಾರೆ. ಇದೇ ವರ್ಷಾರಂಭದಲ್ಲಿ ನಡೆದಿದ್ದ ಮೊದಲ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್‌ನ ಫೈನಲ್‌ ಪಂದ್ಯದಲ್ಲಿ ಉಭಯ ಆಟಗಾರರು ಮುಖಾಮುಖಿಯಾಗಿದ್ದರು. ಇಲ್ಲಿ ಜಾನಿಕ್‌ ಸಿನ್ನರ್‌ ಗೆದ್ದು ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಇದೀಗ ಮತ್ತೆ ಇವರಿಬ್ಬರ ಮಧ್ಯೆ ಹೋರಾಟ ನಡೆಯಲಿದೆ. ಅಂದಿನ ಫೈನಲ್‌ ಸೋಲಿಗೆ ಮೆಡ್ವೆಡೇವ್‌ ಈ ಟೂರ್ನಿಯಲ್ಲಿ ಸೇಡು ತೀರಿಸಿಕೊಂಡರೇ ಎಂದು ಕಾದು ನೋಡಬೇಕಿದೆ.

ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಾನಿಕ್‌ ಸಿನ್ನರ್‌ ಸ್ಥಳೀಯ ಆಟಗಾರ ಟಾಮಿ ಪಾಲ್ ವಿರುದ್ಧ 7-6 (7-3) 7-6 (7-5) 6-1 ಪ್ರಯಾಸದ ಗೆಲುವು ಸಾಧಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಇಗಾ ಸ್ವಿಯಾಟೆಕ್‌ 16ನೇ ಶ್ರೇಯಾಂಕದ ಲಿಯುಡ್ಮಿಲಾ ಸ್ಯಾಮ್ಸೊನೊವಾ ಎದರು 6-4, 6-1 ನೇರ ಸೆಟ್‌ಗಳ ಸುಲಭ ಗೆಲುವು ಸಾಧಿಸಿದರು. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸ್ವಿಯಾಟೆಕ್‌ 6ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ವಿರುದ್ಧ ಕಣಕ್ಕಿಳಿಯಲಿದ್ದಾರೆ.