Thursday, 12th December 2024

Vinesh Phogat: ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ರೈಲ್ವೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ವಿನೇಶ್ ಫೋಗಟ್

Vinesh Phogat

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಮಾಜಿ ಒಲಿಂಪಿಯನ್‌ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರು ತಮ್ಮ ರೈಲ್ವೆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಿನೇಶ್‌ ಜತೆ ಟೋಕಿಯೊ ಒಲಿಂಪಿಕ್‌ ಕಂಚಿನ ಪದಕ ವಿಜೇತ ಬಜರಂಗ್‌ ಪೂನಿಯಾ(Bajrang Punia) ಕೂಡ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಇಬ್ಬರು ಕುಸ್ತಿಪಟುಗಳು ಮುಂಬರುವ ಹರಿಯಾಣ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ರೈಲ್ವೆ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ವಿನೇಶ್, ‘ನನ್ನ ಜೀವನದ ಈ ಹಂತದಲ್ಲಿ ನಾನು ರೈಲ್ವೆ ಸೇವೆಯಿಂದ ಹೊರಗುಳಿಯಲು ನಿರ್ಧರಿಸಿದ್ದು, ಅಧಿಕಾರಿಗಳಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಭಾರತೀಯ ರೈಲ್ವೆಗೆ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಶುಕ್ರವಾರದಂದು ವಿನೇಶ್‌ ಫೋಗಟ್‌ ಮತ್ತು ಬಜರಂಗ್‌ ಪೂನಿಯಾ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇದಾದ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರು ಉಭಯ ಕುಸ್ತಿಪಟುಗಳ ಜತೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಮೂಲಗಳ ಪ್ರಕಾರ, ವಿನೇಶ್‌ ಜೂಲಾನಾ ಅಥವಾ ದಾದ್ರಿ ವಿಧಾನಸಭೆಯಿಂದ ಸ್ಪರ್ಧಿಸುವ ಸಾಧ್ಯತೆಯಿದ್ದರೆ, ಪುನಿಯಾ ಬದ್ಲಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ Haryana Polls: ಪೋಗಟ್‌, ಪೂನಿಯಾ ಕಾಂಗ್ರೆಸ್‌ ಸೇರ್ಪಡೆ- ʻಹರಿಯಾಣ ದಂಗಲ್‌ʼಗೆ ಕುಸ್ತಿಪಟುಗಳು ಸಜ್ಜು

ವಿನೇಶ್‌ ಸ್ಪರ್ಧೆ ಕುರಿತ ಬೆಳವಣಿಗೆಯನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಓಂದೊಮ್ಮೆ ವಿನೇಶ್‌ ಸ್ಪರ್ಧಿಸಿದರೆ, ಇವರ ವಿರುದ್ಧ ಬಿಜೆಪಿ ವಿನೇಶ್‌ ಸಂಬಂಧಿಯೇ ಆಗಿರುವ ಬಬಿತಾ ಫೋಗಟ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ವಿನೇಶ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಳ ಇದ್ದ ಕಾರಣ ಫೈನಲ್‌ನಿಂದ ಅನರ್ಹವಾಗಿ ಐತಿಹಾಸಿಕ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರು. ಅನರ್ಹಗೊಂಡ ಬೇಸರದಲ್ಲೇ ವಿನೇಶ್​ ಕುಸ್ತಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಸಲ್ಲಿಸಿದ್ದ ಮೇಲ್ಮನವಿಯನ್ನು ಕೂಡ ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿ (ಸಿಎಎಸ್) ತಿರಸ್ಕರಿಸಿತ್ತು. ಕಳೆದ ವರ್ಷ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಕುಸ್ತಿಪಟುಗಳು ನಡೆಸಿದ್ದ ಮುಷ್ಕರದಲ್ಲಿ ವಿನೇಶ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.