ಚಂಡೀಗಢ: ಯುವರಾಜ್ ಸಿಂಗ್(Yuvraj Singh) ಅವರ ತಂದೆ, ಭಾರತದ ಮಾಜಿ ವೇಗಿ ಯೋಗರಾಜ್ ಸಿಂಗ್(Yograj Singh) ತಮ್ಮ ಬಾಲ್ಯದಲ್ಲಿ ನಡೆದ ಘಟನೆಯೊಂದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತಮ್ಮ ತಂದೆ ಹುಲಿಯನ್ನು ಗುಂಡಿಟ್ಟು ಕೊಂದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಯೋಗರಾಜ್ ಅವರ ಈ ಹೇಳಿಗೆ ಇದೀಗ ಭಾರೀ ಚರ್ಚೆಗೆ(Viral News) ಕಾರಣವಾಗಿದೆ.
ಖಾಸಗಿ ಸುದ್ದಿ ವಾಹಿನಿ ಜತೆಗಿನ ಸಂದರ್ಶನವೊಂದರಲ್ಲಿ ಯೋಗರಾಜ್ ಅವರಿಗೆ ತಮ್ಮ ಅಕಾಡೆಮಿ ಸೇರುವವರು ಯಾವ ಮನಸ್ಥಿತಿಯಲ್ಲಿರಬೇಕು ಎಂದು ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಅಕಾಡೆಮಿ ಸೇರುವವರಿಗೆ ಮೊದಲು ಸಾವಿನ ಭಯ ಇರಬಾರದು ಎಂದು ಹೇಳಿದರು.
ಇದೇ ವೇಳೆ ಮೂರು ವರ್ಷದವನಿದ್ದಾಗ ಅಪ್ಪನ ಜತೆ ಹುಲಿ ಬೇಟೆಗೆ ಹೋದ ವಿಚಾರವನ್ನು ಕೂಡ ತಿಳಿಸಿದರು. “ನನ್ನನು ತಂದೆ ಹುಲಿ ಬೇಟೆಗೆ ಕರೆದುಕೊಂಡು ಹೋಗುತ್ತಿದ್ದರು. ಅಮ್ಮನಿಗೆ ಇದು ಭಯವಾಗಿತ್ತು. ಆದರೆ ಅಪ್ಪ ನಾನು ಸತ್ತರೆ ಏನಾಗುವುದಿಲ್ಲ ನನ್ನ ಜತೆ ಬಂದರೆ ಆತನನ್ನು ಹುಲಿಯಂತೆ ಮಾಡುತ್ತೇನೆ. ಎಂದು ಅಮ್ಮನಿಗೆ ಹೇಳಿ ನನ್ನನ್ನು ಕರೆದುಕೊಂಡರು ಕಾಡಿಗೆ ಕರೆದುಕೊಂಡು ಹೋಗುತ್ತಿದ್ದರ. ಒಂದು ಬಾರಿ ನಾನು ಹುಲಿಯನ್ನು ನೋಡಿ ಜೋರಾಗಿ ಅಳಲು ಪ್ರಾರಂಭಿಸಿದೆ. ಆಗ ನನ್ನ ತಾಯಿ ಬಾಯಿ ಮುಚ್ಚಿದರು. ಹುಲಿ ನಮ್ಮ ಬಳಿ ಬಂದಾಗ ನನ್ನ ತಂದೆ ಅದರ ತಲೆಗೆ ಗುಂಡಿಟ್ಟು ಹೊಡೆದರು. ಅದು ಸ್ಥಳದಲ್ಲೇ ಪ್ರಾಣಬಿಟ್ಟಿತು” ಎಂದು ಯೋಜರಾಜ್ ಹೇಳಿದರು.
“ತಂದೆ ಹುಲಿಯನ್ನು ಕೊಂದ ಬಳಿಕ ನನ್ನನ್ನು ಹುಲಿಯ ದೇಹದ ಮೇಲೆ ಕೂರಿಸಿ ಅದರ ರಕ್ತವನ್ನು ಹಣೆ ಹಾಗೂ ತುಟಿಗೆ ಹಚ್ಚಿದರು. ನಮ್ಮ ಮನೆಯಲ್ಲಿ ಈಗಲೂ ಆ ಫೋಟೋ ಇದೆ. ನನ್ನನ್ನು ತಂದೆ ಹುಲಿಯಂತೆ ಬೆಳೆಸಿದರು. ನಾನು ಕೂಡ ನನ್ನ ಅಕಾಡೆಮಿ ಸೇರುವವರನ್ನು ಹುಲಿಯಂತೆ ತಯಾರು ಮಾಡುತ್ತೇನೆ. ನಾನು ಯುವರಾಜ್ನನ್ನು ಹೇಗೆ ತಯಾರು ಮಾಡಿದ್ದೀನೋ ಅದೇ ರೀತಿ ನನ್ನ ಅಕಾಡೆಮಿ ಸೇರುವವರನ್ನು ತಯಾರು ಮಾಡುತ್ತೇನೆ” ಎಂದು ಯೋಗರಾಜ್ ಸಿಂಗ್ ಹೇಳಿದರು.
ಇದನ್ನೂ ಓದಿ IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಯುವರಾಜ್ ಮುಖ್ಯ ಕೋಚ್
ಯೋಗರಾಜ್ ಸಿಂಗ್ ಅವರು ಭಾರತ ತಂಡದ ಪರ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಕ್ರಿಕೆಟಿಗನಾಗಿ ಹೆಚ್ಚು ಖ್ಯಾತಿ ಗಳಿಸದ ಅವರು ಮಾರ್ಗದರ್ಶನದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಚಂಡೀಗಢದ ಡಿಎವಿ ಅಕಾಡೆಮಿ ನಡೆಸುತ್ತಿರುವ ಯೋಗರಾಜ್ ತಮ್ಮ ಮಗ ಯುವರಾಜ್ ಸಿಂಗ್ ಅವರನ್ನು ಶ್ರೇಷ್ಠ ಕ್ರಿಕೆಟಿಗನಾಗಿ ರೂಪಿಸಿದ್ದರು. ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಕೂಡ ಯೋಗರಾಜ್ ಅವರ ಗರಡಿಯಲ್ಲೇ ಟ್ರೈನಿಂಗ್ ಪಡೆಯುತ್ತಿದ್ದಾರೆ.