Saturday, 23rd November 2024

Virat Kohli Birthday: ವಿರಾಟ್‌ ಕೊಹ್ಲಿಗೆ ಜನ್ಮದಿನದ ಶುಭ ಹಾರೈಸಿದ ಪಾಕಿಸ್ತಾನ

ಕರಾಚಿ: ಟೀಮ್‌ ಇಂಡಿಯಾದ (IND VS PAK) ಕ್ರಿಕೆಟಿಗ ವಿರಾಟ್‌ ಕೊಹ್ಲಿಗೆ(Virat Kohli Birthday) ವಿಶ್ವ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಇವರ ಆಟ ನೋಡಲೆಂದೇ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿರುತ್ತಾರೆ. ಭಾರತ ಬದ್ಧ ಎದುರಾಳಿ ಪಾಕಿಸ್ತಾನದಲ್ಲಿಯೂ ಕೊಹ್ಲಿಗೆ ಅಪಾರ ಅಭಿಮಾನಿಗಳಿದ್ದಾರೆ. ಈ ಅಭಿಮಾನ ಎಷ್ಟರ ಮಟ್ಟಿಗೆ ಎಂದರೆ ಭಾರತ-ಪಾಕ್‌ ಪಂದ್ಯವಿದ್ದರೂ ಪಾಕ್‌ ಅಭಿಮಾನಿಗಳು ಕೊಹ್ಲಿಗೆ ಬೆಂಬಲ ಸೂಚಿಸುತ್ತಾರೆ. ಅದೊಷ್ಟೋ ಬಾರಿ ಈ ನಿದರ್ಶನಗಳನ್ನು ಈಗಾಗಲೇ ಕಂಡಿದ್ದೇವೆ. ಇದೀಗ 36ನೇ ವಸಂತಕ್ಕೆ ಕಾಲಿಟ್ಟ ವಿರಾಟ್‌ ಕೊಹ್ಲಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(Pakistan Cricket Board) ವಿಶೇಷವಾಗಿ ಜನ್ಮದಿನದ ಶುಭಾಶಯ ತಿಳಿಸಿದೆ.

ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ವಿರಾಟ್‌ ಕೊಹ್ಲಿಯ ಫೋಟೊ ಹಂಚಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ‘ಜನಮದಿನ್ ಮುಬಾರಕ್ ಹೋ ಅಬ್ಬು, ವಿರಾಟ್‌ ಕೊಹ್ಲಿʼ ಎಂದು ಬರೆದುಕೊಂಡಿದೆ. ಪಿಸಿಬಿ(PCB) ಪೋಸ್ಟ್‌ ಮಾಡಿರುವ ಕೊಹ್ಲಿಯ ಫೋಟೊ, 2022ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ಮೈದಾನದಲ್ಲಿ ನಡೆದಿದ್ದ​ ಟಿ-20 ವಿಶ್ವಕಪ್‌(t20 world cup 2022) ಪಂದ್ಯದ ವೇಳೆ ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌(Haris Rauf) ಬೌಲಿಂಗ್‌ಗೆ ಕೊಹ್ಲಿ ಲೀಲಾಜಾಲವಾಗಿ ಸಿಕ್ಸರ್‌ ಬಾರಿಸಿದ್ದು.

ಅಂದು ನಡೆದಿದ್ದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ರೌಫ್‌ ಅವರು ಎಸೆದಿದ್ದ 19ನೇ ಓವರ್‌ನ ಕೊನೆಯ 2 ಎಸೆತಗಳನ್ನು ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ಸತತವಾಗಿ ಸಿಕ್ಸರ್‌ಗೆ ಬಡಿದಿಟ್ಟಿದ್ದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತ್ತು. ಕೊಹ್ಲಿ ಈ 2 ಸಿಕ್ಸರ್‌ ಬಾರಿಸದೇ ಹೋಗಿದ್ದರೆ ಪಾಕಿಸ್ತಾನ ಪಂದ್ಯವನ್ನು ಗೆಲ್ಲುತ್ತಿತ್ತು. ರೌಫ್‌ ಈ ಓವರ್‌ನಲ್ಲಿ 15 ರನ್‌ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಅಜೇಯ 82 ರನ್‌ ಬಾರಿಸಿ ಭಾರತದ ಗೆಲುವಿನ ಹೀರೊ ಎನಿಸಿಕೊಂಡಿದ್ದರು.

ಇದನ್ನೂ ಓದಿ Virat Kohli Birthday Special: ಜನ್ಮದಿನದಂದೇ ಶತಕ ಬಾರಿಸಿದ ಸಾಧಕರ ಯಾದಿಯಲ್ಲಿ ಕೊಹ್ಲಿಗೆ ಎಷ್ಟನೇ ಸ್ಥಾನ?

ಪಾಕ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಯೂನಿಸ್‌ ಖಾನ್‌ ಭಾರತದ ಸ್ಟಾರ್​ ಬ್ಯಾಟರ್‌ ವಿರಾಟ್‌ ಕೊಹ್ಲಿ ಪಾಕಿಸ್ತಾನಕ್ಕೆ ಬರಬೇಕು, ಅವರು ಇಲ್ಲಿ ಆಡಬೇಕು, ಇದು ನಮ್ಮ ಆಸೆ ಎಂದು ಕೆಲ ದಿನಗಳ ಹಿಂದೆ ಸಂದರ್ಶನವೊಂದರ್ಲಿ ಹೇಳಿದ್ದರು. ಮುಂದಿನ ವರ್ಷ ಪಾಕ್‌ನಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡ ಪಾಕ್‌ಗೆ ತೆರಳಿದರೆ ಕೊಹ್ಲಿಗೆ ಮೊತ್ತ ಮೊದಲ ಬಾರಿಗೆ ಪಾಕ್‌ ನೆಲದಲ್ಲಿ ಆಡಿದ ಅನುಭವ ಸಿಗಲಿದೆ.

ವಿರಾಟ್‌ ಕೊಹ್ಲಿಯ ಆತ್ಮೀಯ ಗೆಳೆಯ ಮಾಜಿ, ಆಟಗಾರ ಯುವರಾಜ್‌ ಸಿಂಗ್‌, ಟ್ವೀಟ್‌ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದ್ದು, ‘ಜನ್ಮದಿನದ ಶುಭಾಶಯಗಳು ಕಿಂಗ್‌ ಕೊಹ್ಲಿ. ನೀವು ಹಿನ್ನಡೆಗಳಿಂದ ಹೊರಬಂದು ಮತ್ತೆ ಮೈದಾನದಲ್ಲಿ ಘರ್ಜಿಸುವುದನ್ನು ನೋಡಲು ಜಗತ್ತು ಕುತೂಹಲದಿಂದ ಎದುರು ನೋಡುತ್ತಿದೆ. ನೀವು ಮತ್ತೊಮ್ಮೆ ಬ್ಯಾಟಿಂಗ್‌ ಫಾರ್ಮ್‌ಗೆ ಮರಳುತ್ತೀರಿ ಮತ್ತು ನಿಗದೆ ಇದು ಸಾಧ್ಯ ಎಂದು ನನಗೆ ಖಾತ್ರಿಯಿದೆ. ದೇವರ ಆಶೀರ್ವಾದ! ಬಹಳಷ್ಟು ಪ್ರೀತಿ ಇರಲಿʼ ಎಂದು ಯುವಿ ಹಾರೈಸಿದ್ದಾರೆ.