ಸಿಡ್ನಿ: ಬಾರ್ಡರ್-ಗವಾಸ್ಕರ್ ಟೆಸ್ಟ್(Border-Gavaskar Trophy) ಸರಣಿ ಆರಂಭಕ್ಕೆ ಇನ್ನು ಕೇವಲ ಮೂರು ದಿನಗಳು ಬಾಕಿ ಉಳಿದಿವೆ. ನ.22 ರಂದು ಪರ್ತ್ನಲ್ಲಿ ಮೊದಲ ಪಂದ್ಯವನ್ನಾಡುವ ಮೂಲಕ ಸರಣಿಗೆ ಚಾಲನೆ ಸಿಗಲಿದೆ. ಸರಣಿ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್(David Warner) ಅವರು ಆಸೀಸ್ ತಂಡಕ್ಕೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಕೊಹ್ಲಿಯನ್ನು(Virat Kohli) ಕೆಣಕಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.
ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನಾಡುವ ಮೂಲಕ ವಾರ್ನರ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದರು. ಇದೀಗ ಭಾರತ ಮತ್ತು ಆಸೀಸ್ ನಡುವಣ ಟೆಸ್ಟ್ ಸರಣಿಯ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ವಾರ್ನರ್, ʼ ಪ್ರಾಮಾಣಿಕವಾಗಿ ಹೇಳುವುದಾದರೆ ವಿರಾಟ್ ಕೊಹ್ಲಿಯನ್ನು ಕೆಣಕಿದರೆ ಆಸೀಸ್ ಹಿನ್ನಡೆಯಾವುದು ಖಚಿತ. ಈ ಹಿಂದಿನ ಪ್ರವಾಸದಲ್ಲಿ ಅವರನ್ನು ಕೆಣಕಿ ಕೈ ಸುಟ್ಟುಕೊಂಡಿದ್ದೇವೆ. ಈ ಬಾರಿ ಈ ತಪ್ಪುನ್ನು ಆಟಗಾರರು ತಪ್ಪಿಯೂ ಮಾಡ ಬಾರದುʼ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ʼಕೊಹ್ಲಿಯನ್ನು ಕೆಣಕಿದ್ದಷ್ಟು ಅವರ ಬ್ಯಾಟಿಂಗ್ ಆರ್ಭಟ ಹೆಚ್ಚಾಗುತ್ತದೆ. ಈಗಾಗಲೇ ಅವರು ರನ್ ಹಸಿವಿನಲ್ಲಿದ್ದಾರೆ. ಕೆಣಕಿದರೆ ಬ್ಯಾಟಿಂಗ್ ಜತೆಗೆ ಆನ್ ಫೀಲ್ಡ್ನಲ್ಲಿಯೂ ಆಸೀಸ್ಗೆ ಅಪಾಯ ಹೆಚ್ಚು. ಏಕೆಂದರೆ ತಾನು ಮಾತ್ರವಲ್ಲದೆ ಸಹ ಆಟಗಾರರನ್ನು ಕೂಡ ಬಡಿದೆಬ್ಬಿಸಿ ಎಲ್ಲರನ್ನು ಅಗ್ರೆಸಿವ್ ರೀತಿಯಲ್ಲಿ ಆಡುವಂತೆ ಕೊಹ್ಲಿ ಪ್ರೇರೇಪಿಸುತ್ತಾರೆ. ಹೀಗಾಗಿ ಕೊಹ್ಲಿಯನ್ನು ಅವರಷ್ಟಕ್ಕೇ ಬಿಟ್ಟುಬಿಡಬೇಕು. ಅವರ ತಂಟೆಗೆ ಹೋಗಬಾರದುʼ ಎಂದು ವಾರ್ನರ್ ಕಿವಿ ಮಾತು ಹೇಳಿದ್ದಾರೆ.
ಇದನ್ನೂ ಓದಿ IND vs AUS: ಜಸ್ಪ್ರೀತ್ ಬುಮ್ರಾಗೆ ರೂಪಿಸಿರುವ ಗೇಮ್ ಪ್ಲ್ಯಾನ್ ರಿವೀಲ್ ಮಾಡಿದ ಉಸ್ಮಾನ್ ಖವಾಜ!
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿ 1352 ರನ್ ಬಾರಿಸಿದ್ದಾರೆ. ಈ ವೇಳೆ 6 ಶತಕ ಸಿಡಿಸಿದ್ದಾರೆ. ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿರುವುದು ಕೂಡ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ. 2018/19 ನಡೆದಿದ್ದ ಸರಣಿ ಇದಾಗಿತ್ತು. ನಾಲ್ಕು ಪಂದ್ಯಗಳ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. 2020/21 ರ ಸರಣಿಯ ವೇಳೆಯೂ ಕೊಹ್ಲಿ ನಾಯಕನಾಗಿದ್ದರೂ ಮೊದಲ ಪಂದ್ಯದ ಬಳಿಕ ಅವರು ಮೊದಲ ಮಗುವಿನಿ ನಿರೀಕ್ಷೆಯಲ್ಲಿ ಸರಣಿಯಿಂದ ಅರ್ಧಕ್ಕೆ ತವರಿಗೆ ಮರಳಿದ್ದರು. ಹೀಗಾಗಿ ರಹಾನೆ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಸರಣಿ ಜಯಿಸಿದ್ದರು.