ಪರ್ತ್: ಬಹುನಿರೀಕ್ಷಿತ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಭಾರೀ ಆತಂಕವೊಂದು ಎದುರಾಗಿದೆ. ಅಭ್ಯಾಸ ಪಂದ್ಯದ ವೇಳೆ ಮೊಣಕ್ಕೆ ಗಾಯಕ್ಕೆ ತುತ್ತಾಗಿ ಕೆ.ಎಲ್ ರಾಹುಲ್(KL Rahul Injury) ಗಾಯಗೊಂಡ ಬೆನ್ನಲ್ಲೇ ಇದೀಗ ಅನುಭವಿ ಆಟಗಾರ ವಿರಾಟ್ ಕೊಹ್ಲಿಯೂ(Virat Kohli injured) ಗಾಯಗೊಂಡಿದ್ದು ಸ್ಕ್ಯಾನಿಂಗ್ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಪರ್ತ್ನಲ್ಲಿ ನ.22 ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್ಗೆ ಕೊಹ್ಲಿ ಕಳೆದ ಮೂರು ದಿನಗಳಿಂದ ನೆಟ್ಸ್ನಲ್ಲಿ ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಅಭ್ಯಾಸದ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಕೊಹ್ಲಿ ಗಾಯಗೊಂಡಿದ್ದು ಅವರನ್ನು ಸ್ಕ್ಯಾನಿಂಗ್ಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ ಅಥವಾ ಟೀಮ್ ಮ್ಯಾನೇಜ್ಮೆಂಟ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಕೊಹ್ಲಿ ತವರಿನ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಆಡಿದ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 93 ರನ್ ಮಾತ್ರ. ಹೀಗಾಗಿ ಕೊಹ್ಲಿ ಟೀಮ್ ಇಂಡಿಯಾಕ್ಕೂ ಒಂದು ದಿನ ಮುಂಚಿತವಾಗಿ ಆಸೀಸ್ ತಲುಪಿ ಕಠಿಣ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದರು. ಇದೀಗ ಅವರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ.
ರಾಹುಲ್ ಮೊಣಕೈಗೆ ಗಾಯ
ಭಾರತ ʼಎʼ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ರಾಹುಲ್ ಪ್ರಸಿದ್ಧ್ ಕೃಷ್ಣ ಎಸೆದ ಬೌನ್ಸರ್ ಎಸೆತವೊಂದನ್ನು ಹೊಡೆಯುವ ಯತ್ನದಲ್ಲಿ ಬಲ ಮೊಣಕೈಗೆ ಗಾಯ ಮಾಡಿಕೊಂಡಿದ್ದಾರೆ. ಗಾಯದಿಂದ ನರಳಿದ ರಾಹುಲ್ ಬ್ಯಾಟಿಂಗ್ ಅರ್ಧಕ್ಕೆ ಮೊಟಕುಗೊಳಿಸಿ ಫಿಸಿಯೊ ಜತೆ ಮೈದಾನ ತೊರೆದರು. ಸದ್ಯ ಅವರ ಗಾಯದ ಬಗ್ಗೆ ಯಾವುದೇ ಅಪ್ಡೇಟ್ ಲಭ್ಯವಿಲ್ಲ. ರಾಹುಲ್ ಅಭ್ಯಾಸ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜತೆ ಆರಂಭಿಕನಾಗಿ ಇನಿಂಗ್ಸ್ ಆರಂಭಿಸಿದ್ದರು. ಒಂದೊಮ್ಮೆ ಗಾಯದ ಸ್ವರೂಪ ಗಂಭೀರ ಸ್ವರೂಪದಿಂದ ಕೂಡಿದ್ದರೆ ಮೊದಲ ಪಂದ್ಯದಿಂದ ಹೊರಗುಳಿಯಬಹುದು. ಅವರ ಬದಲು ಅಭಿಮನ್ಯು ಈಶ್ವರನ್ ಆಡಬಹುದು.
ಇದನ್ನೂ ಓದಿ Japan Masters; ಜಪಾನ್ ಮಾಸ್ಟರ್ಸ್ನಲ್ಲಿ ಭಾರತದ ಸವಾಲು ಅಂತ್ಯ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಬೇಕಿದ್ದರೆ ಭಾರತಕ್ಕೆ ಆಸೀಸ್ ವಿರುದ್ಧದ ಸರಣಿ ಗೆಲ್ಲಲೇ ಬೇಕು. ಹೀಗಿರುವಾಗಲೇ ಅನುಭವಿ ಆಟಗಾರರು ಗಾಯಕ್ಕೆ ತುತ್ತಾಗುತ್ತಿರುವುದು ತಂಡಕ್ಕೆ ದೊಡ್ಡ ಆತಂಕ ಮೂಡಿಸಿದೆ. ಒಂದೊಮ್ಮೆ ಈ ಆಟಗಾರರು ಗಾಯದಿಂದ ಅಲಭ್ಯರಾದರೆ ಎದುರಾಳಿ ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಲಿದೆ. ನಾಯಕ ರೋಹಿತ್ ಕೂಡ ಮೊದಲ ಪಂದ್ಯಕ್ಕೆ ಲಭ್ಯವಾಗುವ ಕುರಿತು ಇನ್ನೂ ನಿಶ್ಚಿತತೆ ಇಲ್ಲ.