Thursday, 12th December 2024

Virat Kohli: ಕಿವೀಸ್‌ ಸರಣಿಯಲ್ಲಿ ವಿಶೇಷ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ

ಬೆಂಗಳೂರು: ಪ್ರವಾಸಿ ನ್ಯೂಜಿಲ್ಯಾಂಡ್‌(New Zealand) ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆರಂಭಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಉಭಯ ತಂಡಗಳ ನಡುವಣ ಮೊದಲ ಪಂದ್ಯ ಬುಧವಾರ (ಅ.16) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M.Chinnaswamy Stadium) ನಡೆಯಲಿದೆ.

ವಿರಾಟ್‌ ಕೊಹ್ಲಿ(Virat Kohli) ಕಿವೀಸ್‌ ಸರಣಿಯಲ್ಲಿ 53 ರನ್‌ ಬಾರಿಸಿದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ ಕ್ಲಬ್‌ ಸೇರಲಿದ್ದಾರೆ. ಆಗ ಅವರು 9 ಸಾವಿರ ರನ್‌ ಗಳಿಸಿದ ಭಾರತದ 4ನೇ ಕ್ರಿಕೆಟಿಗನಾಗಿ ಮೂಡಿಬರಲಿದ್ದಾರೆ. ಉಳಿದವರೆಂದರೆ ಸಚಿನ್‌ ತೆಂಡೂಲ್ಕರ್‌ (15,921), ರಾಹುಲ್‌ ದ್ರಾವಿಡ್‌ (13,265) ಮತ್ತು ಸುನೀಲ್‌ ಗಾವಸ್ಕರ್‌ (10,122). ಸದ್ಯ ಕೊಹ್ಲಿ 195 ಇನಿಂಗ್ಸ್‌ ಆಡಿ 8947* ರನ್‌ ಬಾರಿಸಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಕೊಹ್ಲಿಗೆ ಚಿನ್ನಸ್ವಾಮಿ ಮೈದಾನ ತವರು ಸ್ಟೇಡಿಯಂ ಎಂದರೂ ತಪ್ಪಾಗಲಾರದು. ಈ ಮೈದಾನದಲ್ಲಿ ಕೊಹ್ಲಿ ಉತ್ತಮ ದಾಖಲೆಯನ್ನು ಕೂಡ ಹೊಂದಿದ್ದಾರೆ. ಹೀಗಾಗಿ ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸಿದರೂ ಅಚ್ಚರಿಯಿಲ್ಲ. ಕೊಹ್ಲಿ ಟೆಸ್ಟ್‌ನಲ್ಲಿ ಶತಕ ಬಾರಿಸಿದೆ ಸರಿ ಸುಮಾರು ಒಂದುವರೆ ವರ್ಷ ಕಳೆದಿದೆ. ಕೊನೆಯ ಬಾರಿಗೆ ಶತಕ ಬಾರಿಸಿದ್ದು 2023 ಜುಲೈನಲ್ಲಿ. ವಿಂಡೀಸ್‌ ವಿರುದ್ಧದ ಸರಣಿ ಇದಾಗಿತ್ತು. ಕೊಹ್ಲಿಗೆ ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರು ಮೊದಲ ಪಂದ್ಯದಲ್ಲಿಯೇ ಶತಕ ಬಾರಿಸಲಿ ಎನ್ನುವುದು ಅಭಿಮಾನಿಗಳ ಆಶಯವೂ ಆಗಿದೆ. ಶನಿವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಕೊಹ್ಲಿ ಅಭ್ಯಾಸ ಕೂಡ ಆರಂಭಿಸಿದ್ದಾರೆ. ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ಫೋಟೊಗಳು ವೈರಲ್‌ ಆಗಿದೆ. ಅಚ್ಚರಿ ಎಂದರೆ ಮಾಜಿ ಕೋಚ್‌ ದ್ರಾವಿಡ್‌ ಕೂಡ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಂಡು ರೋಹಿತ್‌, ಪಂತ್‌ ಮತ್ತು ಕೊಹ್ಲಿಗೆ ಬ್ಯಾಟಿಂಗ್‌ ಸಲಹೆ ನೀಡಿದ್ದಾರೆ.

ಇದನ್ನೂ ಓದಿ IND vs NZ Test: ಬೆಂಗಳೂರು ತಲುಪಿದ ರೋಹಿತ್‌, ಕೊಹ್ಲಿ

ಪಂದ್ಯಕ್ಕೆ ಮಳೆ ಭೀತಿ

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವ ಕಾರಣ ಪಂದ್ಯಕ್ಕೆ ಮಳೆ ಭೀತಿಯೂ ಎದುರಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿರುವ ಕಾರಣ. ಮಳೆ ಬಂದರೂ ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಳೆ ಬಂದರೂ ಸೀಮಿತ ಓವರ್​ಗಳ ಪಂದ್ಯವನ್ನು ನಿರೀಕ್ಷಿಸಬಹುದು. ಬಾಂಗ್ಲಾ ವಿರುದ್ಧದ ಕಾನ್ಪುರ ಟೆಸ್ಟ್‌ನಂತೆ ದಿನದಾಟ ರದ್ದಾಗದು. ದಿನವಿಡಿ ಮಳೆ ಬಂದರೆ ಆಟ ನಡೆಯುವುದು ಅಸಾಧ್ಯ.