ದುಬಾೖ: ಟೀಮ್ ಇಂಡಿಯಾದ ಟಿ20 ನಾಯಕತ್ವವನ್ನು ಬಿಡುವುದಾಗಿ ತಿಳಿಸಿದ ವಿರಾಟ್ ಕೊಹ್ಲಿ ಇದೀಗ ಆರ್‌ಸಿಬಿ ನಾಯಕನ ಜವಾಬ್ದಾರಿಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.
2021ನೇ ಸಾಲಿನ ಐಪಿಎಲ್ ಮುಗಿದ ಬಳಿಕ ಆರ್‌ಸಿಬಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಯುವುದಾಗಿ ಭಾನುವಾರ ರಾತ್ರಿ ತಿಳಿಸಿದ್ದಾರೆ. 2013ರಲ್ಲಿ ವೆಟರಿ ಅವರ ಉತ್ತರಾಧಿಕಾರಿಯಾಗಿ ನೇಮಕ ಗೊಂಡ ವಿರಾಟ್ ಕೊಹ್ಲಿ, 132 ಪಂದ್ಯ ಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದಾರೆ. 62ರಲ್ಲಿ ತಂಡ ಜಯಿಸಿದ್ದು, 66ರಲ್ಲಿ ಸೋಲನುಭವಿಸಿದೆ. 4 ಪಂದ್ಯಗಳು ಫಲಿತಾಂಶ ಕಂಡಿಲ್ಲ.
ಪ್ರತಿಭಾನ್ವಿತರ ಪಡೆಯ ನಾಯಕತ್ವ ವಹಿಸುವ ಅವಕಾಶ ಕಲ್ಪಿಸಿಕೊಟ್ಟ ಆರ್‌ಸಿಬಿ ಹಾಗೂ ಈ ಫ್ರಾಂಚೈಸಿಯ ಕುಟುಂಬಕ್ಕೆ ಧನ್ಯವಾದಗಳು. ಆರ್‌ಸಿಬಿಯ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್. ನನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವವರೆಗೂ ಆರ್‌ಸಿಬಿ ಆಟಗಾರನಾಗಿ ಮುಂದುವರಿಯು ತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟಿರುವುದಕ್ಕೆ ಹಾಗೂ ನನ್ನನ್ನು ಬೆಂಬಲಿಸಿದ ಎಲ್ಲ ಆರ್‌ಸಿಬಿ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಕೊಹ್ಲಿ ಹೇಳಿದರು.
ಆರ್ಸಿಬಿ ಫ್ರಾಂಚೈಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡುವ ಮೂಲಕ ಕೊಹ್ಲಿ ನಾಯಕನ ಸ್ಥಾನವನ್ನು ತ್ಯಜಿಸುವುದಾಗಿ ಪ್ರಕಟಿ ಸಿತು. ಕೊಹ್ಲಿ ಕೆಲವೇ ದಿನಗಳ ಹಿಂದೆ ಟ್ವೆಂಟಿ-20 ಕ್ರಿಕೆಟ್ ನಾಯಕತ್ವವನ್ನು ಮುಂಬರುವ ವಿಶ್ವಕಪ್ ಬಳಿಕ ತ್ಯಜಿಸುವುದಾಗಿ ಘೋಷಿಸಿದ್ದರು.
7 ಪಂದ್ಯಗಳಲ್ಲಿ 10 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್ ಸಿಬಿ ಈ ಬಾರಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಬೆಂಗಳೂರು ತಂಡ ಸೋಮವಾರ ಕೆಕೆಆರ್ ಅನ್ನು ಎದುರಿಸುವ ಮೂಲಕ ಐಪಿಎಲ್-2021ರಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.