Wednesday, 4th December 2024

Virat Kohli : ವಿಶೇಷ ದಾಖಲೆಯ ಸನಿಹದಲ್ಲಿ ಕಿಂಗ್ ಕೊಹ್ಲಿ!

Virat Kohli

ಮೆಲ್ಬೋರ್ನ್‌: ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ನಡುವೆ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border-Gavaskar Trophy) ಟೆಸ್ಟ್‌ ಸರಣಿ ನಡೆಯುತ್ತಿದೆ. ಭಾರತ ತಂಡ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯರನ್ನು 295 ರನ್‌ಗಳಿಂದ ಸೋಲಿಸಿದೆ. ಎರಡನೇ ಪಂದ್ಯ ಅಡಿಲೇಡ್‌ನಲ್ಲಿ ನಡೆಯಲಿದ್ದು,ಉಭಯ ತಂಡಗಳು ಸಜ್ಜಾಗುತ್ತಿವೆ. ಇದರ ನಡುವೆ ರನ್‌ ಮಷಿನ್‌ ವಿರಾಟ್‌ ಕೊಹ್ಲಿ (Virat Kohli) ಮತ್ತೊಂದು ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗುತ್ತಿದ್ದಾರೆ. ಸದ್ಯ ಕಳಪೆ ಫಾರ್ಮ್‌ನಿಂದ ಹೊರಬಂದಿರುವ ಕೊಹ್ಲಿ, ಕಳೆದ ಪಂದ್ಯದಲ್ಲಿ ತಮ್ಮ 30ನೇ ಟೆಸ್ಟ್ ಶತಕ ಸಿಡಿಸಿ ಮತ್ತೆ ಹಳೆ ಫಾರ್ಮ್‌ಗೆ ಮರಳಿದ್ದಾರೆ. ಇದೀಗ ಕೊಹ್ಲಿ ಹೊಸ ದಾಖಲೆಗೆ ಸನಿಹದಲ್ಲಿದ್ದು ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಜಗತ್ತಿನ ಮೊದಲ ಬ್ಯಾಟ್ಸ್‌ಮೆನ್‌ ಎಂದೆನಿಸಿಕೊಳ್ಳುವ ತವಕದಲ್ಲಿದ್ದಾರೆ.

ಆಸ್ಟ್ರೇಲಿಯಾದ ಪರ್ತ್‌ ಟೆಸ್ಟ್‌ ಗೆಲ್ಲುವ ಮೂಲಕ ಟೀಮ್‌ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಈ ಹಿಂದೆ ಕಳಪೆ ಫಾರ್ಮ್‌ನಲ್ಲಿದ್ದ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ತಮ್ಮ ಏಳನೆ ಶತಕ ಸಿಡಿಸುವ ಮೂಲಕ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ಸರಿಗಟ್ಟಿದ್ದರು. 143 ಎಸೆತಗಳಲ್ಲಿ 2 ಸಿಕ್ಸರ್‌ ಸೇರಿದಂತೆ 8 ಬೌಂಡರಿಗಳೊಂದಿಗೆ ಅಜೇಯ ಶತಕ ಗಳಿಸಿದ್ದರು. ಬರೋಬ್ಬರಿ 18 ತಿಂಗಳ ನಂತರ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಇದೀಗ ಮತ್ತೊಂದು ಸಾಧನೆಯ ಸನಿಹದಲ್ಲಿದರುವ ವಿರಾಟ್‌, ಜಾಕ್ ಹಾಬ್ಸ್ ದಾಖಲೆ ಮುರಿದರೆ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಮೊದಲ ವಿದೇಶಿ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಇತಿಹಾಸ ಬರೆಯಲು ವಿರಾಟ್‌ ಕೊಹ್ಲಿಗೆ 3 ಶತಕ ಅಗತ್ಯ

ಇತ್ತೀಗಷ್ಟೇ ಆಸ್ಟ್ರೇಲಿಯಾದಲ್ಲಿ 7 ಶತಕ ಪೂರೈಸಿದ ಕೊಹ್ಲಿ ಇನ್ನು ಮೂರು ಶತಕ ಗಳಿಸಿದರೆ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಟೆಸ್ಟ್‌ ಶತಕ ಸಿಡಿಸಿದ ಆಟಗಾರ ಎಂದೆನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಆ ದಾಖಲೆ ಇಂಗ್ಲೆಂಡ್‌ನ ದಿಗ್ಗಜ ಆಟಗಾರ ಜ್ಯಾಕ್ ಹಾಬ್ಸ್ ಅವರ ಹೆಸರಿನಲ್ಲಿದೆ. ಅವರು ಆಸ್ಟ್ರೇಲಿಯಾದಲ್ಲಿ ಒಟ್ಟು 9 ಶತಕ ಸಿಡಿಸಿದ್ದು, ಅಗ್ರ ಸ್ಥಾನದಲ್ಲಿದ್ದಾರೆ. ಉಳಿದಂತೆ ಇಂಗ್ಲೆಂಡ್‌ನ ಮಾಜಿ ಆಟಗಾರ ವ್ಯಾಲಿ ಹ್ಯಾಮಂಡ್ 7 ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 7, ಸಚಿನ್ ತೆಂಡೂಲ್ಕರ್ 6 ಹಾಗೂ ಇಂಗ್ಲೆಂಡ್‌ನ ಮತ್ತೊಬ್ಬ ಆಟಗಾರ ಹರ್ಬರ್ಟ್ ಸಚ್‌ಲಿಫ್‌ 6 ಶತಕಗಳ ಸಾಧನೆ ಮಾಡಿದ್ದಾರೆ.

ಅಡಿಲೇಡ್‌ನಲ್ಲಿ ನಡೆಯಲಿರುವ ಪಿಂಕ್‌ ಬಾಲ್‌ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ಸಾಧನೆಯ ಸನಿಹದಲ್ಲಿದ್ದಾರೆ. ಅಡಿಲೇಡ್‌ನಲ್ಲಿ ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಆಟಗಾರ ಬ್ರಿಯಾನ್ ಲಾರಾ 610 ರನ್ ರನ್‌ ಗಳಿಸಿದ ಮೊದಲ ಆಟಗಾರ ಎಂದೆನಿಸಿಕೊಂಡಿದ್ದಾರೆ. ವಿರಾಟ್‌ ಈಗಾಗಲೇ 509 ರನ್ ಗಳಿಸಿದ್ದು, ಎರಡನೇ ಟೆಸ್ಟ್‌ನಲ್ಲಿ 102 ರನ್ ಗಳಿಸಿದರೆ, ಅವರು ಒಟ್ಟು 611 ರನ್‌ ಗಳಿಸಿದಂತಾಗುತ್ತದೆ. ಆ ಮೂಲಕ ಬ್ರಿಯಾನ್ ಲಾರಾ ಅವರ ಬೃಹತ್ ದಾಖಲೆಯನ್ನು ಮುರಿಯುವ ಅವಕಾಶವಿದೆ.

ಈ ಸುದ್ದಿಯನ್ನೂ ಓದಿ : IND vs AUS: ಆಸ್ಟ್ರೇಲಿಯಾ ಟೆಸ್ಟ್‌ ಸರಣಿ ಗೆಲ್ಲಲು ಭಾರತಕ್ಕೆ ಉಪಯುಕ್ತ ಸಲಹೆ ನೀಡಿದ ಮೈಕಲ್‌ ವಾನ್‌!