Wednesday, 25th September 2024

Virat Kohli: ಕೊಹ್ಲಿಯ ಚಿತ್ರಕಲೆ ಕಂಡು ಕಂಗಾಲಾದ ಅಭಿಮಾನಿಗಳು; ವಿಡಿಯೊ ವೈರಲ್‌

Virat Kohli

ಮುಂಬಯಿ: ಬಾಂಗ್ಲಾದೇಶ ವಿರುದ್ಧ ದ್ವಿತೀಯ ಟೆಸ್ಟ್‌ ಪಂದ್ಯವನ್ನಾಡಲು ಭಾರತ ತಂಡ ಈಗಾಗಲೇ ಕಾನ್ಪುರ ತಲುಪಿದ್ದು ಅಭ್ಯಾಸ ಕೂಡ ಆರಂಭಿಸಿದೆ. ಈ ಮಧ್ಯೆ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ(Virat Kohli) ಬಿಡಿಸಿದ ರೇಖಾಚಿತ್ರವೊಂದು ವೈರಲ್‌(viral video) ಆಗಿದೆ.

ಪೂಮಾದ ಬ್ರ್ಯಾಂಡ್ ಅಂಬಾಸಿಡರ್‌ ಆಗಿರುವ ವಿರಾಟ್‌ ಕೊಹ್ಲಿ ಜಾಹೀರಾತಿನ ಭಾಗವಾಗಿ ಪೂಮಾ ಬೆಕ್ಕಿನ ರೇಖಾಚಿತ್ರವೊಂದನ್ನು ಬಿಡಿಸಿದ್ದಾರೆ. ಇದರ ಫೋಟೊವನ್ನು ಕೊಹ್ಲಿ ಮತ್ತು ಪೂಮಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೊಹ್ಲಿ ಬಿಡಿಸಿದ ಈ ಬೆಕ್ಕಿನ ಚಿತ್ರಕಲೆಯನ್ನು ಕಂಡು ಅವರ ಅಭಿಮಾನಿಗಳು ತಮಾಷೆಯ ಮೀಮ್ಸ್‌ಗಳ ಮೂಲಕ ಕಾಲೆಳೆದಿದ್ದಾರೆ. ಕೆಲವರು ‘ವೆಲ್‌ಕಮ್’ ಚಿತ್ರದ ಮಜ್ನು ಭಾಯ್ ಅವರ ಚಿತ್ರಕಲೆಗೆ ಹೋಲಿಕೆ ಮಾಡಿದ್ದಾರೆ. 2017ರಲ್ಲಿ ಕೊಹ್ಲಿ ಪೂಮಾ ಜತೆಗೆ ಒಪ್ಪಂದ ಮಾಡಿಕೊಂಡಿದ್ದರು.

ವಿರಾಟ್​ ಕೊಹ್ಲಿ ಅವರು ವಿಶ್ವ ಕ್ರಿಕೆಟ್​ನ ಅತ್ಯಂತ ಫಿಟ್​ ಆಗಿರುವ ಕ್ರಿಕೆಟಿಗ ಅವರ ಫಿಟ್​ನೆಸ್​ ಬಗ್ಗೆ ಬದ್ಧ ವೈರಿ ಪಾಕ್​ ತಂಡದ ಆಟಗಾರರು ಸೇರಿ ವಿಶ್ವದ ಅನೇಕರು ಸಲಾಂ ಹೊಡೆದಿದ್ದಾರೆ. ಅದೆಷ್ಟೋ ಕ್ರಿಕೆಟ್‌ ಆಟಗಾರರಿಗೆ ಅವರು ಫಿಟ್‌ನೆಸ್‌ ವಿಚಾರದಲ್ಲಿಯೂ ಸ್ಫೂರ್ತಿಯಾಗಿದ್ದಾರೆ. ಇತರ ಆಟಗಾರರಂತೆ ವಿರಾಟ್ ಕೊಹ್ಲಿ ಗಾಯಗೊಂಡು ತಂಡದಿಂದ ಹೊರಗುಳಿದ ನಿದರ್ಶನ ಇದುವರೆಗೂ ಕಂಡುಬಂದಿಲ್ಲ. ಕ್ರಿಕೆಟ್​ ಆಡಲು ಆರಂಭಿಸಿದ ದಿನದಿಂದಲೂ ಕೊಹ್ಲಿ ತಮ್ಮ ಫಿಟ್​ನೆಸ್​ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡು ಕ್ರಿಕೆಟ್​ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

12 ವರ್ಷಗಳ ಬಳಿಕ ರಣಜಿ ಆಡಲಿದ್ದಾರಾ ಕೊಹ್ಲಿ?

2024-25ನೇ ರಣಜಿ ಟ್ರೋಫಿ(Ranji Trophy) ಆವೃತ್ತಿಗಾಗಿ ಡೆಲ್ಲಿ ಕ್ರಿಕೆಟ್‌ ಮಂಡಳಿ ಸಂಭಾವ್ಯ ತಂಡವನ್ನು ಪ್ರಕಟಿಸಿದೆ. ಅಚ್ಚರಿ ಎಂದರೆ ಈ ತಂಡದಲ್ಲಿ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿಯ(Virat Kohli) ಹೆಸರು ಕೂಡ ಕಾಣಿಸಿಕೊಂಡಿದೆ. ಟೆಸ್ಟ್‌ನಲ್ಲಿ ಬ್ಯಾಟಿಂಗ್‌ ಪಾರ್ಮ್‌ ಕಳೆದುಕೊಂಡಿರುವ ಕೊಹ್ಲಿ ಮತ್ತೆ ಬ್ಯಾಟಿಂಗ್‌ ಲಯಕ್ಕೆ ಮರಳುವ ನಿಟ್ಟಿನಲ್ಲಿ ರಣಜಿ ಆಡುವ ಸಾಧ್ಯತೆಯೂ ಕಂಡು ಬಂದಿದೆ. ಒಂದೊಮ್ಮೆ ಕೊಹ್ಲಿ ಡೆಲ್ಲಿ ಪರ ಆಡಿದರೆ, 12 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿದಂತಾಗುತ್ತದೆ.

ವಿರಾಟ್‌ ಕೊಹ್ಲಿ ಕೊನೆಯ ಬಾರಿಗೆ ಡೆಲ್ಲಿ ಪರ ರಣಜಿ ಆಡಿದ್ದು 2012-13ರ ಆವೃತ್ತಿಯಲ್ಲಿ. ಅದು ಉತ್ತರ ಪ್ರದೇಶ ವಿರುದ್ಧದ ಪಂದ್ಯವಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ 14 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 42 ರನ್‌ ಬಾರಿಸಿ ಎರಡೂ ಇನಿಂಗ್ಸ್‌ನಲ್ಲಿಯೂ ಭುವನೇಶ್ವರ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದ್ದರು. ಇದಾದ ಬಳಿಕ ಅವರು ಆಡಿಲ್ಲ. ಕೊಹ್ಲಿ 146 ಪ್ರಥಮ ದರ್ಜೆ ಪಂದ್ಯಗಳಿಂದ 49.86 ಸರಾಸರಿಯಲ್ಲಿ 11,120 ರನ್ ಗಳಿಸಿದ್ದಾರೆ. 36 ಶತಕಗಳು ಮತ್ತು 38 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಜೇಯ 254 ರನ್‌ ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.