Saturday, 23rd November 2024

‌Virat Kohli: ಕೊಹ್ಲಿಯ ಸಿಕ್ಸರ್‌ ಹೊಡೆತಕ್ಕೆ ಬಿರುಕು ಬಿಟ್ಟ ಚೆಪಾಕ್‌ ಸ್ಟೇಡಿಯಂನ ಗೋಡೆ; ವಿಡಿಯೊ ವೈರಲ್

Virat Kohli

ಚೆನ್ನೈ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಬರೋಬ್ಬರಿ 8 ತಿಂಗಳ ಬಳಿಕ ಕೊಹ್ಲಿ ಆಡುತ್ತಿರುವ ಮೊದಲ ಟೆಸ್ಟ್‌ ಪಂದ್ಯ ಇದಾಗಿದೆ. ಹೀಗಾಗಿ ನೆಟ್ಸ್‌ನಲ್ಲಿ ಕಠಿಣ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದಾರೆ. ಅಭ್ಯಾಸ ವೇಳೆ ಕೊಹ್ಲಿ ಬಾರಿಸಿದ ಸಿಕ್ಸರ್‌ ಹೊಡೆತಕ್ಕೆ ಎಂಎ ಚಿದಂಬರಂ ಸ್ಟೇಡಿಯಂನ ಗೋಡೆಯಲ್ಲಿ(Chepauk Wall) ರಂಧ್ರವೊಂದು ಉಂಟಾಗಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೊಹ್ಲಿಯ ಅಭಿಮಾನಿಗಳು ಈ ವಿಡಿಯೊವನ್ನು ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿಯೂ ಶೇರ್‌ ಮಾಡಲಾರಂಭಿಸಿದ್ದಾರೆ.

ವಿರಾಟ್‌ ಕೊಹ್ಲಿ ಭಾರತ ಪರ ಕೊನೆಯ ಬಾರಿಗೆ ಟೆಸ್ಟ್‌ ಸರಣಿಯನ್ನಾಡಿದ್ದು ಜನವರಿಯಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಇದಾಗಿತ್ತು. ಇದಾದ ಬಳಿಕ ಕೊಹ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿ
ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್‌ ಸರಣಿಯಿಂದ ಹೊರಗುಳಿದಿದ್ದರು.

ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಒಟ್ಟು ಆರು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಒಂದು ಶತಕ ಮತ್ತು ದ್ವಿಶತಕ ಹಾಗೂ ಅರ್ಧಶತಕ ಬಾರಿಸಿ ಒಟ್ಟು 437 ರನ್‌ ಬಾರಿಸಿದ್ದಾರೆ. ಚೆನ್ನೈಯ ಚೆಪಾಕ್‌ ಮೈದಾನದಲ್ಲಿ ಕೊಹ್ಲಿ ಉತ್ತಮ ಬ್ಯಾಟಿಂಗ್‌ ದಾಖಲೆಯನ್ನು ಕೂಡ ಹೊಂದಿದ್ದಾರೆ.

ಇದನ್ನೂ ಓದಿ IND vs BAN: ಚೆನ್ನೈಗೆ ಬಂದಿಳಿದ ಬಾಂಗ್ಲಾ ತಂಡಕ್ಕೆ ಭರ್ಜರಿ ಸ್ವಾಗತ; ಇಲ್ಲಿದೆ ವಿಡಿಯೊ

ವಿಶ್ವ ದಾಖಲೆ ಸನಿಹ ಕೊಹ್ಲಿ

ಬಾಂಗ್ಲಾ ವಿರುದ್ಧ ಕೊಹ್ಲಿ 58ರನ್‌ ಬಾರಿಸಿದರೆ ದಿಗ್ಗಜ ಸಚಿನ್‌ ತೆಂಡೂಲ್ಕರ್‌(Sachin Tendulkar) ದಾಖಲೆಯನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ. ಜತೆಗೆ 147 ವರ್ಷಗಳ(147 Years) ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಕೊಹ್ಲಿ 58 ರನ್‌ ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಪೂರೈಸಲಿದ್ದಾರೆ. ಈ ಮೂಲಕ 147 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27,000 ರನ್‌ಗಳನ್ನು ತಲುಪಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ, ಸಚಿನ್ ಹೊರತುಪಡಿಸಿ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಟೆಸ್ಟ್​ನಲ್ಲಿ ಕೊಹ್ಲಿ 113 ಪಂದ್ಯಗಳಲ್ಲಿ 8848 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 30 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.