ಸಿಡ್ನಿ: ಬಾರ್ಡರ್-ಗವಾಸ್ಕರ್ ಟೆಸ್ಟ್(Border-Gavaskar Trophy) ಸರಣಿ ಆರಂಭಕ್ಕೆ ಇನ್ನೂ 2 ವಾರಗಳಿದ್ದರೂ ಆಸ್ಟ್ರೇಲಿಯಾದಲ್ಲಿ ಈ ಸರಣಿಯ ಕಾವು ಬೇಗ ಆರಂಭವಾಗಿದೆ. ಆಸ್ಟ್ರೇಲಿಯಾದ ದಿನ ಪತ್ರಿಕೆಯಲ್ಲಿ ಮುಖ ಪುಟದಲ್ಲಿ(Aussie newspaper) ವಿರಾಟ್ ಕೊಹ್ಲಿಯ(Virat Kohli) ಫೋಟೊಗಳು ರಾಜಾಜಿಸಿವೆ. ಈ ಫೋಟೊ ಎಲ್ಲಡೆ ವೈರಲ್ ಆಗಿದೆ.
ಆಸ್ಟ್ರೇಲಿಯಾದ ಹಿಂದಿ ಮತ್ತು ಪಂಜಾಬಿ ಪತ್ರಿಕೆಯ ಮುಖ ಪುಟದಲ್ಲಿ ವಿರಾಟ್ ಕೊಹ್ಲಿಯ ಫೋಟೊ ಹಾಕಿ ಕ್ರಿಕೆಟ್ ಸರಣಿಯ ಜಾಹೀರಾತು ನೀಡಲಾಗಿದೆ. ಇದರಲ್ಲಿ ಭಾರತ-ಆಸೀಸ್ ಈ ಹಿಂದಿನ ಪ್ರವಾಸದ ದಾಖಲೆಗಳು ಮತ್ತು ವಿರಾಟ್ ಕೊಹ್ಲಿಯ ಸಾಧನೆಗಳನ್ನು ಬರೆಯಲಾಗಿದೆ. ಬೇಸಗೆ ಕ್ರಿಕೆಟ್ ಫೈಟ್‌ಗೆ ಸಿದ್ಧರಾಗಿ, ʼದಿʼ ನ್ಯೂ ಕಿಂಗ್ʼ ಎಂದು ಮತ್ತೊಂದು ಪ್ರತಿಕೆಯಲ್ಲಿ ಕೊಹ್ಲಿಯ ಫೋಟೊ ಹಾಕಿ ಹೆಡ್‌ಲೈನ್ ನೀಡಲಾಗಿದೆ. ಸರಣಿಯ ಮೊದಲ ಕೊಹ್ಲಿಯ ಕ್ರೇಜ್ ಆಸೀಸ್‌ನಲ್ಲಿ ಭಾರೀ ಸುದ್ದು ಮಾಡಲಾರಂಭಿಸಿದೆ. ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಸರಣಿ ಗೆದ್ದ ಭಾರತೀಯ ನಾಯಕ ಎಂಬ ದಾಖಲೆಯೂ ಕೊಹ್ಲಿ ಹೆಸರಿನಲ್ಲಿ. 2018-19ರಲ್ಲಿ ನಡೆದಿದ್ದ ಸರಣಿಯಲ್ಲಿ ಭಾರತ ಕೊಹ್ಲಿ ನಾಯಕತ್ವದಲ್ಲಿ 2-1 ಅಂತರದಿಂದ ಸರಣಿ ಜಯಿಸಿತ್ತು.
ವಿರಾಟ್ ಕೊಹ್ಲಿ ಹಾಲಿ ಪ್ರವಾಸದಲ್ಲಿ ಮೊದಲಿಗರಾಗಿ ಆಸೀಸ್ ತಲುಪಿದ್ದಾರೆ. ಭಾನುವಾರ ಸಂಜೆಯೇ ಅಡಿಲೇಡ್ ತಲುಪಿದ್ದರು. ಸದ್ಯ ಕಳಪೆ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಫಾರ್ಮ್‌ಗೆ ಮರಳುವರೇ ಎಂದು ಕಾದು ನೋಡಬೇಕಿದೆ.
ಆಸೀಸ್‌ನಲ್ಲಿ ಉತ್ತಮ ದಾಖಲೆ
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ಇದುವರೆಗೆ ಆಸೀಸ್ ನೆಲದಲ್ಲಿ 25 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ, 2042 ರನ್ ಬಾರಿಸಿದ್ದಾರೆ. ಈ ವೇಳೆ ಅವರ ಬ್ಯಾಟ್‌ನಿಂದ 8 ಶತಕ ಸಿಡಿದಿದೆ. 5 ಅರ್ಧಶತಕ ದಾಖಲಾಗಿದೆ. ಮೂರು ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಕೊಹ್ಲಿ 2011 ರಿಂದ 2023ರ ತನಕ ಆಡಿದ ಬಾರ್ಡರ್-ಗವಾಸ್ಕರ್ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 1,979 ರನ್ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 7ನೇ ಸ್ಥಾನಿಯಾಗಿದ್ದಾರೆ.
ಇದನ್ನೂ ಓದಿ IND vs AUS: ಪರ್ತ್ ತಲುಪಿದ ಟೀಮ್ ಇಂಡಿಯಾದ ಮೊದಲ ಬ್ಯಾಚ್
ವಿರಾಟ್ ಕೊಹ್ಲಿಯ(Virat Kohli) ಬ್ಯಾಟಿಂಗ್ ಫಾರ್ಮ್ ಬಗ್ಗೆ ಟೀಕಿಸಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್(Ricky Ponting) ವಿರುದ್ಧ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದರು. ಸೋಮವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ್ದ ಗೌತಮ್ ಗಂಭೀರ್, ವಿರಾಟ್ ವಿಶ್ವ ದರ್ಜೆಯ ಕ್ರಿಕೆಟಿಗ ರನ್ ಗಳಿಸಬೇಕೆಂಬ ಅವರ ಹಸಿವು ಯಾವಾಗಲೂ ಅವರಲ್ಲಿ ಇರುತ್ತದೆ, ಆ ಹಸಿವೆಯೇ ಅವರನ್ನು ವಿಶ್ವ ದರ್ಜೆಯ ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಆಸ್ಟ್ರೇಲಿಯಾದಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಹೇಳುವ ಮೂಲಕ ಪಾಂಟಿಂಗ್‌ಗೆ ತಕ್ಕ ಉತ್ತರ ನೀಡಿದ್ದರು.
ಪಾಂಟಿಂಗ್ ಕೆಲ ದಿನಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆಡುವವರು ಕಳೆದ ಐದು ವರ್ಷಗಳಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿರುವವರು ಬಹುಶಃ ಯಾರು ಇರಲಕ್ಕಿಲ್ಲ ಎಂದು ಕೊಹ್ಲಿಯನ್ನು ಟೀಕಿಸಿದ್ದರು.