Thursday, 12th December 2024

ಜೂನಿಯರ್ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ವಿಶ್ವಾಮಿತ್ರ ಚೋಂಗ್‌ಥಮ್

ನವದೆಹಲಿ: 51 ಕೆಜಿ ವಿಭಾಗದಲ್ಲಿ ವಿಶ್ವಾಮಿತ್ರ ಚೋಂಗ್‌ಥಮ್ ಸೇರಿದಂತೆ ಭಾರತದ ನಾಲ್ವರು ಬಾಕ್ಸರ್‌ಗಳು ಏಷ್ಯನ್ ಯೂತ್ ಮತ್ತು ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ದುಬೈನಲ್ಲಿ ನಡೆಯುತ್ತಿರುವ ಕೂಟದಲ್ಲಿ ಕನಿಷ್ಠ ಕಂಚಿನ ಪದಕ ಗಳನ್ನು ಖಚಿತಪಡಿಸಿದ್ದಾರೆ.

ವಿಶ್ವ ಯೂತ್ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ವಿಶ್ವಾಮಿತ್ರ ಅವರು 5-0ಯಿಂದ ಕಜಕಸ್ತಾನದ ಕೆಂಜೆ ಮುರಾತಲ್‌ ಎದುರು ಗೆದ್ದು ನಾಲ್ಕರ ಘಟ್ಟ ತಲುಪಿದರು. ಅಭಿಮನ್ಯು ಲೌರಾ (92 ಕೆಜಿ), ದೀಪಕ್‌ (75 ಕೆಜಿ) ಹಾಗೂ ಪ್ರೀತಿ (ಮಹಿಳೆಯರ 57 ಕೆಜಿ ವಿಭಾಗ) ಸೆಮಿಫೈನಲ್‌ಗೆ ತಲುಪಿದ ಇನ್ನುಳಿದ ಮೂವರು.

ಮಿಡ್ಲ್‌ವೇಟ್‌ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ದೀಪಕ್‌ ಇರಾಕ್‌ನ ಧುರ್‌ಗಮ್‌ ಕರೀಂ ಎದುರು ಜಯ ಸಾಧಿಸಿದರು. ಹರಿಯಾಣದ ಅಭಿಮನ್ಯು ಅವರು ಎಂಟರಘಟ್ಟದ ಹಣಾಹಣಿಯಲ್ಲಿ ಕಿರ್ಗಿಸ್ತಾನದ ತೆನಿಬೆಕೊವ್‌ ಸಂಜಾರ್ ಅವರನ್ನು ಪರಾಭವಗೊಳಿಸಿದರು. 86 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಆದಿತ್ಯ ಜಾಂಗು ಅವರು ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಕಜಕಸ್ತಾನದ ತೆಮ್ರಲಾನ್‌ ಎದುರು ಮಣಿದರು.