ಗ್ರೆನೆಡಾ: ಮೊದಲ ಟಿ20 ಪಂದ್ಯವನ್ನು ಎಂಟು ವಿಕೆಟ್ ಗಳ ಅಂತರದಿಂದ ಗೆದ್ದ ವೆಸ್ಟ್ ಇಂಡೀಸ್ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಕ್ವಿಂಟನ್ ಡಿ ಕಾಕ್ 37 ರನ್ ಗಳಿಸಿದರೆ, ನಾಯಕ ಬವುಮಾ 22 ರನ್ ಮಾಡಿದರು. ವಾನ್ ಡರ್ ಡ್ಯುಸನ್ 56 ರನ್ ಗಳಿಸಿದ್ದೇ ಹರಿಣಗಳ ಪಾಳಯದ ಹೆಚ್ಚಿನ ಗಳಿಕೆ. ವಿಂಡೀಸ್ ಪರ ಫ್ಯಾಬಿಯನ್ ಅಲೆನ್ ಮತ್ತು ಬ್ರಾವೋ ತಲಾ ಎರಡು ವಿಕೆಟ್ ಪಡೆದರೆ, ಹೋಲ್ಡರ್ ಮತ್ತು ರಸ್ಸೆಲ್ ತಲಾ ಒಂದು ವಿಕೆಟ್ ಪಡೆದರು.
161 ರನ್ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ಗೆ ಆಂದ್ರೆ ಫ್ಲೆಚರ್ ಮತ್ತು ಎವಿನ್ ಲೂಯಿಸ್ ಭರ್ಜರಿ ಆರಂಭ ಒದಗಿಸಿದರು. ಲೂಯಿಸ್ 35 ಎಸೆತದಲ್ಲಿ 71 ರನ್ ಹಾಗೂ ಫ್ಲೆಚರ್ 30 ರನ್ ಗಳಿಸಿ ಔಟಾದರು. ನಂತರ ಬಂದ ಕ್ರಿಸ್ ಗೈಲ್ 32 ರನ್ ಗಳಿಸಿ ಅಜೇಯರಾದರೆ, ರಾಷ್ಟ್ರೀಯ ಟಿ20 ತಂಡದಲ್ಲಿ ಆಡುತ್ತಿರುವ ರಸ್ಸೆಲ್ ಅಜೇಯ 23 ರನ್ ಚಚ್ಚಿದರು.
ವೆಸ್ಟ್ ಇಂಡೀಸ್ ತಂಡ ಎರಡು ವಿಕೆಟ್ ಕಳೆದುಕೊಂಡು ಕೇವಲ 15 ಓವರ್ ನಲ್ಲಿ 161 ರನ್ ಗಳಿಸಿ ಜಯ ಸಾಧಿಸಿತು. ವಿಂಡೀಸ್ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ. ಆದರೆ 15 ಸಿಕ್ಸರ್ ಸಿಡಿಯಿತು.