Wednesday, 4th December 2024

WI vs BAN: ಗ್ಯಾರಿ ಸೋಬರ್ಸ್‌ರ 52 ವರ್ಷಗಳ ದಾಖಲೆ ಮುರಿದ ಕ್ರೈಗ್‌ ಬ್ರಾಥ್‌ ವೇಟ್‌!

WI vs BAN: West Indies Kraigg Brathwaite breaks Gary Sobers' 52-year-old historic Test record

ನವದೆಹಲಿ: ವೆಸ್ಟ್‌ ಇಂಡೀಸ್‌ ತಂಡದ ಕ್ರೈಗ್‌ ಬ್ರಾಥ್‌ವೇಟ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ವೆಸ್ಟ್‌ ಇಂಡೀಸ್‌ ಪರ ಸತತವಾಗಿ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿರುವ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕ್ರೈಗ್‌ ಬ್ರಾಥ್‌ವೇಟ್‌, ದಿಗ್ಗಜ ಗ್ಯಾರಿ ಸೋಬರ್ಸ್‌ ಅವರನ್ನು ಹಿಂದಿಕ್ಕಿದ್ದಾರೆ. ಜಮೈಕಾದ ಕಿಂಗ್‌ಸ್ಟನ್‌ನಲ್ಲಿರುವ ಸಬಿನಾ ಪಾರ್ಕ್‌ನಲ್ಲಿ ಶನಿವಾರ ಆರಂಭವಾಗಿದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ (WI vs BAN) ಟಾಸ್‌ ಮುಗಿಯುತ್ತಿದ್ದಂತೆ ಕ್ರೈಗ್‌ ಬ್ರಾಥ್‌ ವೇಟ್‌ ಈ ದಾಖಲೆಯನ್ನು ಬರೆದಿದ್ದಾರೆ.

ಕ್ರೈಗ್‌ ಬ್ರಾಥ್‌ವೇಟ್‌ 2014ರಲ್ಲಿಯೇ ವೆಸ್ಟ್‌ ಇಂಡೀಸ್‌ ಪರ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನವನ್ನು ಆರಂಭಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು 10 ವರ್ಷಗಳಿಂದ ಸತತವಾಗಿ ಟೆಸ್ಟ್‌ ಕ್ರಿಕೆಟ್‌ ಆಡುತ್ತಿದ್ದಾರೆ. ವಿಂಡೀಸ್‌ ದಿಗ್ಗಜ ಗ್ಯಾರಿ ಸೋಬರ್ಸ್‌ ಅವರು 1995 ರಿಂದ 1972ರವರೆಗೆ 85 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ದೆಷ್ಮಂಡ್‌ ಹೇನ್ಸ್‌ ಅವರು (72), ಬ್ರಿಯನ್‌ ಲಾರಾ (64), ರೋಹನ್‌ ಕನ್ನೈ (61), ವಿವಿಯನ್‌ ರಿಚರ್ಡ್ಸ್‌ (61) ಹಾಗೂ ಕೌರ್ಟ್ನಿ ವಾಲ್ಷ್ (53) ಅವರು ಅವರು ಈ ಸಾಧಕರ ಸಾಲಿನಲ್ಲಿ ಇದ್ದಾರೆ.

IND vs AUS: ಗೆಲುವಿನೊಂದಿಗೆ ಹಲವು ದಾಖಲೆ ಬರೆದ ಭಾರತ

ಒಟ್ಟಾರೆ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಇಂಗ್ಲೆಂಡ್‌ ಮಾಜಿ ನಾಯಕ ಆಲ್‌ಸ್ಟೈರ್‌ ಕುಕ್‌ ಅವರ ಹೆಸರಿನಲ್ಲಿದೆ. ಇವರು 2006ರ ಮೇನಿಂದ 2018ರ ಸೆಪ್ಟಂಬರ್‌ವರೆಗೆ ಇಂಗ್ಲೆಂಡ್‌ ತಂಡದ ಪರ 159 ಟೆಸ್ಟ್‌ ಪಂದ್ಯಗಳನ್ನು ಸತತವಾಗಿ ಆಡಿದ್ದಾರೆ. ಇನ್ನುಳಿದ ಸ್ಥಾನಗಳಲ್ಲಿ ಕ್ರಮವಾಗಿ ಅಲಾನ್‌ ಬಾರ್ಡರ್‌ (153), ಮಾರ್ಕ್‌ ವಾ (153), ಸುನೀಲ್‌ ಗವಾಸ್ಕರ್‌ 106), ಬ್ರೆಂಡನ್‌ ಮೆಕಲಮ್‌ (101) ಹಾಗೂ ನೇಥನ್‌ ಲಯಾನ್‌ (100) ಇದ್ದಾರೆ.

ವೆಸ್ಟ್‌ ಇಂಡೀಸ್‌ ಪರ ಸತತ ಟೆಸ್ಟ್‌ ಪಂದ್ಯಗಳನ್ನು ಆಡಿದ ಆಟಗಾರರು

ಕ್ರೈಗ್‌ ಬ್ರಾಥ್‌ವೇಟ್‌-86 ಟೆಸ್ಟ್‌ ಪಂದ್ಯಗಳು (2014-2024)
ಗ್ಯಾರಿ ಸೋಬರ್ಸ್‌- 85 ಟಸ್ಟ್‌ ಪಂದ್ಯಗಳು (1955-1972)
ದೆಷ್ಮಂಡ್‌ ಹೇನ್ಸ್-‌ 75 ಟೆಸ್ಟ್‌ ಪಂದ್ಯಗಳು (1979-1988)
ಬ್ರಿಯಾನ್‌ ಲಾರಾ-64 ಟೆಸ್ಟ್‌ ಪಂದ್ಯಗಳು (1992-1999)
ರೋಹನ್‌ ಕನ್ನೈ- 61 ಟೆಸ್ಟ್‌ ಪಂದ್ಯಗಳು (1957-1969)
ಸರ್‌ ವಿವಿಯನ್‌ ರಿಚರ್ಡ್ಸ್‌- 61 ಟೆಸ್ಟ್‌ ಪಂದ್ಯಗಳು (1980-1988)
ಕೌರ್ಟ್ನಿ ವಾಲ್ಷ್- 53 ಟೆಸ್ಟ್‌ ಪಂದ್ಯಗಳು-1990-1997)

ಮೊದಲನೇ ದಿನ ವಿಂಡೀಸ್‌ಗೆ ಮೇಲುಗೈ

ಬಾಂಗ್ಲಾದೇಶ ವಿರುದ್ದ ನಡೆಯುತ್ತಿರುವ ಜಮೈಕಾ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಮೊದಲನೇ ದಿನ ಮೇಲುಗೈ ಸಾಧಿಸಿದೆ. ಮೈದಾನ ತೇವ ಇದ್ದ ಕಾರಣ ಪಂದ್ಯದ ಮೊದಲನೇ ದಿನ ನಿಗದಿತ ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕೇವಲ 30 ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಕೇಮರ್‌ ರೋಚ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಬಾಂಗ್ಲಾ ಮೊದಲನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ಗಳ ನಷ್ಟಕ್ಕೆ 69 ರನ್‌ಗಳನ್ನು ಕಲೆ ಹಾಕಿದೆ. ಬಾಂಗ್ಲಾ ತಂಡದ ಮಹಮ್ಮದ್‌ವುಲ್ಲಾ ಹಸನ್‌ ಜಾಯ್‌ ಹಾಗೂ ಮೊಮಿನುಲ್‌ ಹಕ್‌ ಬಹುಬೇಗ ವಿಕೆಟ್‌ ಒಪ್ಪಿಸಿದ್ದಾರೆ.