Sunday, 15th December 2024

ಮಹಿಳಾ ಪ್ರೀಮಿಯರ್ ಲೀಗ್: ಮಾರ್ಚ್ 4ರಂದು ಚಾಲನೆ

ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಮಾರ್ಚ್ 4ರಂದು ಅದ್ಧೂರಿಯಾಗಿ ಚಾಲನೆ ನೀಡಲಿದೆ.

ಉದ್ಘಾಟನಾ ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಲೀಗ್ ಹಂತದಲ್ಲಿ ಐದು ತಂಡಗಳು ಡಬಲ್ ರೌಂಡ್-ರಾಬಿನ್ ಸ್ವರೂಪದಲ್ಲಿ ಕಾದಾಡಲಿವೆ. ಅಗ್ರ ಮೂರು ತಂಡಗಳು ಪ್ಲೇಆಫ್‌ಗಳಿಗೆ ಪ್ರವೇಶಿಸಲಿದ್ದು, ಅಲ್ಲಿ ಎಲಿಮಿನೇಟರ್ ಮತ್ತು ಫೈನಲ್ ಪಂದ್ಯವಾಡಲಿವೆ.

ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಪರ್ಧಿಸುತ್ತಿರುವ ಐದು ತಂಡಗಳು ಈಗಾಗಲೇ ಪುರುಷರ ಐಪಿಎಲ್ ತಂಡಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್ ಜೊತೆಗೆ ಹೊಸ ತಂಡಗಳಾಗಿ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಸೇರ್ಪಡೆಯಾಗಿವೆ.

2023ರ ಮಹಿಳಾ ಪ್ರೀಮಿಯರ್ ಲೀಗ್ ಮುಂಬೈನ ಎರಡು ಸ್ಥಳಗಳಲ್ಲಿ ಒಟ್ಟು 22 ಪಂದ್ಯಗಳನ್ನು ಆಡಿಸಲಾಗು ತ್ತದೆ. ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ.

ಲೀಗ್ ಹಂತವು ಮಾರ್ಚ್ 21ರಂದು ಮುಕ್ತಾಯಗೊಳ್ಳುತ್ತದೆ. ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳನ್ನು ಕ್ರಮವಾಗಿ ಮಾರ್ಚ್ 24 ಮತ್ತು ಮಾರ್ಚ್ 26ರಂದು ನಿಗದಿಪಡಿಸಲಾಗಿದೆ. ಐದು ಫ್ರಾಂಚೈಸಿಗಳು ತಮ್ಮ ನಾಯಕಿಯರನ್ನು ಬಹಿರಂಗಪಡಿಸಿವೆ.

ಆರ್‌ಸಿಬಿ ತಮ್ಮ ನಾಯಕಿಯನ್ನು ಹೆಸರಿಸಿದ ಮೊದಲ ತಂಡವಾಗಿದೆ. ಭಾರತೀಯ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರನ್ನು ಆರ್‌ಸಿಬಿ ತಂಡದ ನಾಯಕಿ ಎಂದು ಘೋಷಿಸಿದೆ.

ಯುಪಿ ವಾರಿಯರ್ಸ್ ಅವರು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ಅವರನ್ನು ನಾಯಕಿಯನ್ನಾಗಿ ನೇಮಕ ಮಾಡಿದ್ದು, ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರ ಉಪನಾಯಕಿಯಾಗಿ ನೇಮಕವಾಗಿದ್ದಾರೆ.

ಇದೇ ವೇಳೆ, ಗುಜರಾತ್ ಜೈಂಟ್ಸ್ ತಂಡವು ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಬೆತ್ ಮೂನಿ ಅವರನ್ನು ನಾಯಕಿಯನ್ನಾಗಿ ಘೋಷಿಸಿದೆ.

ಮುಂಬೈ ಇಂಡಿಯನ್ಸ್ ತಂಡವು ನಿರೀಕ್ಷೆಯಂತೆ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು 2023ರ ಮಹಿಳಾ ಪ್ರೀಮಿಯರ್ ಲೀಗ್‌ಗೆ ತಮ್ಮ ತಂಡದ ನಾಯಕಿಯನ್ನಾಗಿ ಪ್ರಕಟಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ತಮ್ಮ ನಾಯಕಿಯ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ವಿಜೇತ ನಾಯಕಿ ಮೆಗ್ ಲ್ಯಾನಿಂಗ್ ದೆಹಲಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.

ನಾಯಕಿಯರಲ್ಲದೆ, ಎಲ್ಲಾ ಫ್ರಾಂಚೈಸಿಗಳು 2023ರ ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಗೆ ತಮ್ಮ ಕೋಚಿಂಗ್ ಮತ್ತು ಸಿಬ್ಬಂದಿಯನ್ನು ಘೋಷಿಸಿದೆ.