ಬೆಂಗಳೂರು: ಬಾಂಗ್ಲಾದೇಶದ ಆತಿಥ್ಯದಲ್ಲಿ ದುಬೈನಲ್ಲಿ ನಡೆಯಲಿರುವ 9ನೇ ಆವೃತ್ತಿಯ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ(Womens T20 World Cup) ಪಂದ್ಯಾವಳಿಗೆ ನಾಳೆಯಿಂದ ಅಧಿಕೃತ ಚಾಲನೆ ಸಿಗಲಿದೆ. ಅಕ್ಟೋಬರ್ 3ರಿಂದ 20ರವರೆಗೆ ಪಂದ್ಯಾವಳಿ ಸಾಗಲಿದೆ. ಟೂರ್ನಿಯ ಮಾದರಿ, ವೇಳಾಪಟ್ಟಿ ಸೇರಿದಂತೆ ಎಲ್ಲ ವಿವರ ಇಲ್ಲಿದೆ.
ರೌಂಡ್ ರಾಬಿನ್ ಲೀಗ್ ಹಂತ
ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳನ್ನು ತಲಾ 5ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಹಂತದ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ. ಅಕ್ಟೋಬರ್ 17 ಮತ್ತು 18ರಂದು ಕ್ರಮವಾಗಿ ದುಬೈ ಮತ್ತು ಶಾರ್ಜಾದಲ್ಲಿ ಸೆಮಿಫೈನಲ್ ಪಂದ್ಯ ನಡೆಯಲಿವೆ. ಅಕ್ಟೋಬರ್ 20ರಂದು ದುಬೈನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.
ಗುಂಪುಗಳು
ಆಸ್ಟ್ರೆಲಿಯಾ, ಭಾರತ, ನ್ಯೂಜಿಲ್ಯಾಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನ ʼಎʼ ಗುಂಪಿನ ತಂಡಗಳಾದರೆ, ಆತಿಥೇಯ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ʼಬಿʼ ಗುಂಪಿನ ತಂಡಗಳು.
ಮಳೆ ನಿಯಮ
ಟೂರ್ನಿಯಲ್ಲಿ 19 ದಿನಗಳ ಅವಧಿಯಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳು ಶಾರ್ಜಾ, ದುಬೈನಲ್ಲೇ ನಿಗದಿಯಾಗಿವೆ. ನಾಕೌಟ್ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಪಡಿಸಲಾಗಿದೆ. ಲೀಗ್ ಹಂತದ ಯಾವುದೇ ಪಂದ್ಯಗಳಿಗೂ ಮಳೆ ಅಡ್ಡಿಯಾಗಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.
ಸೂಪರ್ ಓವರ್
ಪಂದ್ಯ ಟೈ ಆದರೆ ಸೂಪರ್ ಓವರ್ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಸೂಪರ್ ಓವರ್ ಕೂಡ ಟೈ ಆದರೆ ಇನ್ನೊಂದು ಸೂಪರ್ ಓವರ್ ಇರಲಿದೆ. ಹೀಗೆ ಸ್ಪಷ್ಟ ಫಲಿತಾಂಶ ಲಭಿಸುವ ತನಕ ಸೂಪರ್ ಓವರ್ ಜಾರಿಯಲ್ಲಿರುತ್ತದೆ.
ಭಾರೀ ಬಹುಮಾನ ಮೊತ್ತ
ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ವಿಜೇತರು 2.34 ಮಿಲಿಯನ್ ಡಾಲರ್ ನಿಧಿ (ಸುಮಾರು 19.61 ಕೋಟಿ ರೂ.) ಯನ್ನು ಪಡೆಯಲಿದ್ದಾರೆ. ಇದು ಕಳೆದ ವಿಶ್ವಕಪ್‌ಗಿಂತ ಶೇಕಡಾ 134ರಷ್ಟು ಹೆಚ್ಚು. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನ ವಿಜೇತರಾದ ಆಸ್ಟ್ರೇಲಿಯಾದ ಮಹಿಳೆಯರಿಗೆ ಒಂದು ಮಿಲಿಯನ್ ಡಾಲರ್ ನಿಧಿ (8.38 ಕೋಟಿ ರೂ.)ಯನ್ನು ನೀಡಲಾಗಿತ್ತು. ಒಟ್ಟಾರೆ ಬಹುಮಾನ ನಿಧಿಯಲ್ಲಿ ಶೇಕಡಾ 225ರಷ್ಟು ಏರಿಕೆ ಮಾಡಲಾಗಿದೆ. ಸಮಗ್ರವಾಗಿ 7. 95 ಮಿಲಿಯನ್ ಡಾಲರ್ ಬಹುಮಾನ ನಿಧಿಯನ್ನು ಈ ವಿಶ್ವಕಪ್ ಒಳಗೊಂಡಿದೆ. ಈ ಹಿಂದಿನ ಮಹಿಳಾ ವಿಶ್ವಕಪ್ 2.45 ಮಿಲಿಯನ್ ಡಾಲರ್ ನಿಧಿಯನ್ನು ಒಳಗೊಂಡಿತ್ತು.
ಇದನ್ನೂ ಓದಿ ನಾಳೆಯಿಂದ 9ನೇ ಮಹಿಳಾ ಟಿ20 ವಿಶ್ವಕಪ್: ಚೊಚ್ಚಲ ಪ್ರಶಸ್ತಿ ಗೆಲ್ಲಲಿ ಭಾರತ
ಭಾರತದ ಪಂದ್ಯಗಳು
ದಿನಾಂಕ | ಎದುರಾಳಿ |
ಅಕ್ಟೋಬರ್-4 | ನ್ಯೂಜಿಲ್ಯಾಂಡ್ |
ಅಕ್ಟೋಬರ್-6 | ಪಾಕಿಸ್ತಾನ |
ಅಕ್ಟೋಬರ್-9 | ಶ್ರೀಲಂಕಾ |
ಅಕ್ಟೋಬರ್-13 | ಆಸ್ಟ್ರೇಲಿಯಾ |
ನಾಕೌಟ್ ಪಂದ್ಯಗಳು
ದಿನಾಂಕ | ತಾಣ ಮತ್ತು ಪಂದ್ಯ |
ಅಕ್ಟೋಬರ್ 17 | ಮೊದಲ ಸೆಮಿಫೈನಲ್, ದುಬೈ |
ಅಕ್ಟೋಬರ್ 18 | ಎರಡನೇ ಸೆಮಿಫೈನಲ್, ಶಾರ್ಜಾ |
ಅಕ್ಟೋಬರ್ 20 | ಫೈನಲ್, ದುಬೈ |
ಅಕ್ಟೋಬರ್ 21 | ಫೈನಲ್ ಮೀಸಲು ದಿನ |