ದುಬೈ: ಮಹಿಳಾ ಟಿ20 ವಿಶ್ವಕಪ್(Womens T20 World Cup) ಟೂರ್ನಿಯಲ್ಲಿ ಇದೀಗ ಸೆಮಿಫೈನಲ್ ಲೆಕ್ಕಾಚಾರ ಜೋರಾಗಿದೆ. ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಭಾರತ ಆ ಬಳಿಕ ಆಡಿದ 2 ಪಂದ್ಯಗಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೇರುವ ಅವಕಾಶವನ್ನು ಹೆಚ್ಚಿಸಿಕೊಂಡಿದೆ. ಸದ್ಯ ಭಾರತ 3 ಪಂದ್ಯಗಳನ್ನಾಡಿ 1 ಸೋಲು 2 ಗೆಲುವಿನೊಂದಿಗೆ ನಾಲ್ಕು ಅಂಕ ಗಳಿಸಿ ʼಎʼ ವಿಭಾಗದ ಅಂಕಪಟ್ಟಿಯಲ್ಲಿ(Womens T20 World Cup Points Table) 2ನೇ ಸ್ಥಾನದಲ್ಲಿದೆ. ಅಂತಿಮ ಪಂದ್ಯವನ್ನು ಅಕ್ಟೋಬರ್ 13ರಂದು ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಭಾರತ ಸೆಮಿ ಪ್ರವೇಶದ ಲೆಕ್ಕಾಚಾರ ಹೀಗಿದೆ.
ಆಡಿದ 2 ಪಂದ್ಯಗಳನ್ನು ಗೆದ್ದು 4 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಇನ್ನು 2 ಪಂದ್ಯಗಳು ಬಾಕಿ ಇದೆ. ಈ ಪೈಕಿ ಕನಿಷ್ಠ ಒಂದು ಪಂದ್ಯ ಗೆದ್ದರೂ ಸೆಮಿ ಟಿಕೆಟ್ ಅಧಿಕೃತಗೊಳ್ಳಲಿದೆ. ಎದುರಾಳಿ ಭಾರತ ಮತ್ತು ಪಾಕಿಸ್ತಾನ.
ಇದನ್ನೂ ಓದಿ INDW vs SLW: ಅರ್ಧಶತಕ ಬಾರಿಸಿ ದಾಖಲೆ ಬರೆದ ಮಂಧಾನ
ಭಾರತಕ್ಕೆ ಉಳಿದಿರುವುದು ಇನ್ನು ಕೇವಲ ಒಂದು ಪಂದ್ಯ ಮಾತ್ರ. ಈ ಪಂದ್ಯದಲ್ಲಿ ಸೋತರೆ ಅಧಿಕೃತವಾಗಿ ಹೊರಬೀಳಲಿದೆ. ಗೆದ್ದರೂ ಕೂಡ ನ್ಯೂಜಿಲ್ಯಾಂಡ್ ಮತ್ತು ಪಾಕ್ ತಂಡದ ಫಲಿತಾಂಶ ಕೂಡ ಮುಖ್ಯವಾಗಲಿದೆ. ನ್ಯೂಜಿಲ್ಯಾಂಡ್ ಮುಂದಿನ 2 ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದರೆ ಆಗ ಭಾರತ ಆಸೀಸ್ ವಿರುದ್ಧ ಗೆದ್ದರೂ ಪ್ರಯೋಜನವಿಲ್ಲ.
ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಗೆದ್ದರೆ ಮತ್ತು ನ್ಯೂಜಿಲೆಂಡ್ ಉಳಿದಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಸೋತರೆ ಭಾರತದ ಹಾದಿ ಸುಗಮವಾಗಲಿದೆ. ಹಾಗೊಂದು ವೇಳೆ ಕೊನೆಯ ಪಂದ್ಯದಲ್ಲಿ ಭಾರತ ಸೋತರೆ ಇತರೆ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಬೇಕಿದೆ. ಅಲ್ಲದೆ ಇತರೆ ತಂಡಗಿಂತಲೂ ಉತ್ತಮ ರನ್ರೇಟ್ ಕಾಯ್ದುಕೊಳ್ಳುವ ಅಗತ್ಯವಿದೆ. ಸದ್ಯ ಆಸ್ಟ್ರೇಲಿಯಾ +2.524, ಪಾಕಿಸ್ತಾನ +0.555 ಹಾಗೂ ನ್ಯೂಜಿಲ್ಯಾಂಡ್ -0.050ರ ರನ್ರೇಟ್ ಕಾಯ್ದುಕೊಂಡಿದೆ.
ಏಷ್ಯಾಕಪ್ ಚಾಂಪಿಯನ್ ಆಗಿದ್ದ ಶ್ರೀಲಂಕಾ ತಂಡದ ಮೇಲೆ ಈ ಬಾರಿ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ ಎಲ್ಲ ನಿರೀಕ್ಷೆಗಳು ಹುಸಿಯಾಗಿದೆ. ಆಡಿದ ಮೂರು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಮೊದಲ ತಂಡವಾಗಿ ಹೊರಬಿದ್ದಿದೆ.