Friday, 22nd November 2024

Women’s T20 World Cup : ಟಿ20 ವಿಶ್ವಕಪ್‌ನ ಲೀಗ್‌ ಹಂತದಿಂದಲೇ ಭಾರತ ಔಟ್‌; ಅಭಿಮಾನಿಗಳಿಗೆ ನಿರಾಸೆ

Women's T20 World Cup

ಬೆಂಗಳೂರು: ಭಾರತ ಮಹಿಳೆಯರ ಕ್ರಿಕೆಟ್ ತಂಡ ಟಿ20 ವಿಶ್ವ ಕಪ್‌ನಲ್ಲಿ (Women’s T20 World Cup) ಅಸಂಖ್ಯಾತ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಲೀಗ್ ಹಂತದಿಂದಲೇ ಹರ್ಮನ್‌ಪ್ರೀತ್ ಬಳಗ ಹೊರಕ್ಕೆ ಬಂದಿದೆ. ದೊಡ್ಡ ಮಟ್ಟದ ಬೆಂಬಲದ ಹೊರತಾಗಿಯೂ ಭಾರತ ತಂಡದ ಪ್ರದರ್ಶನವು ಕಳೆಪೆಯಾಗಿರುವುದರ ಬಗ್ಗೆ ಅಭಿಮಾನಿಗಳು ಬೇಸರ ಮೂಡಿಸಿದ್ದಾರೆ. ಲೀಗ್ ಹಂತದಲ್ಲಿ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದ ಭಾರತ ತಂಡ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಫಲಿತಾಂಶಕ್ಕಾಗಿ ಕಾಯುತ್ತಿತ್ತು. ಪಾಕ್ ಗೆದ್ದರೆ ಸೆಮೀಸ್‌ಗೆ ಹೋಗುವ ಅವಕಾಶ ಹೊಂದಿತ್ತು. ಆದರೆ, ಪಾಕ್‌ ತಂಡ ಹೀನಾಯವಾಗಿ ಆಡಿ 54 ರನ್​​ಗಳಿಂದ ಸೋತು ನಿರ್ಗಮಿಸುವ ಜತೆಗೆ ಭಾರತವೂ ಹೊರಕ್ಕೆ ಬೀಳುವಂತೆ ಮಾಡಿದೆ.ಇದೇ ವೇಳೆ ನ್ಯೂಜಿಲೆಂಡ್ ಎ ಗುಂಪಿನಲ್ಲಿ ಎರಡನೇ ತಂಡವಾಗಿ ಸೆಮಿಫೈನಲ್‌ಗೇರಿದೆ.

ಪಾಕ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 110 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 56 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ ಕೂಡ ವಿಶ್ವಕಪ್​ನಿಂದ ಹೊರಬಿದ್ದಿತು. ಈ ಪಂದ್ಯದಲ್ಲಿ ಪಾಕ್ ಗೆಲ್ಲಬೇಕು ಎಂಬುದು ಭಾರತದ ನಿರೀಕ್ಷೆಯಾಗಿತ್ತು. ಅದು ಗೆದ್ದಿದ್ದರೆ, ಟೀಂ ಇಂಡಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿತ್ತು.ಆದರೆ ಭಾರತದ ಅಭಿಮಾನಿಗಳು ನಿರೀಕ್ಷಿಸಿದ ಫಲಿತಾಂಶ ಮೂಡದ ಕಾರಣ ಎಲ್ಲರಿಗೂ ನಿರಾಸೆಯಾಗಿದೆ. ನ್ಯೂಜಿಲೆಂಡ್ ತಂಡ ಆಡಿದ 4 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಪಾಯಿಂಟ್ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನವಾಗಿದ್ದರೆ ಪಾಕಿಸ್ತಾನಕ್ಕೆ ನಾಲ್ಕನೇ ಸ್ಥಾನ ಸಿಕ್ಕಿತು.

ಕಳಪೆ ಪ್ರದರ್ಶನ

ಭಾರತ ತಂಡ ಗುಂಪು ಹಂತದಲ್ಲಿ ಆಡಿದ 4 ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಮಾತ್ರ ಸಾಧಿಸಿತು. ಉಳಿದಂತೆ , ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಕ್ಕೆ ಶರಣಾಯಿತು. ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್​ವರೆಗೆ ಹೋಗಿದ್ದ ಟೀಂ ಇಂಡಿಯಾ, ಈ ಬಾರಿ ಲೀಗ್ ಹಂತದಲ್ಲೇ ಹೊರ ಬಿತ್ತು. ಬ್ಯಾಟಿಂಗ್ ವಿಭಾಗದ ವೈಫಲ್ಯ ಹಾಗೂ ಇಡೀ ಟೂರ್ನಿಯಲ್ಲಿ ತಂಡ ತೋರಿದ ಕಳಪೆ ಫೀಲ್ಡಿಂಗ್ ಪ್ರದರ್ಶನ ಭಾರತ ಸೋಲಿಗೆ ಕಾರಣ.

ಭಾರತದ ಬ್ಯಾಟಿಂಗ್ ಶಕ್ತಿಯಾಗಿದ್ದ ಶಫಾಲಿ ವರ್ಮಾ. ಸ್ಮೃತಿ ಮಂಧಾನ ಸ್ಥಿರ ಪ್ರದರ್ಶನ ನೀಡಲಿಲ್ಲ. ಶ್ರೀಲಂಕಾ ವಿರುದ್ಧ ಸ್ಮೃತಿ ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿ ಮೌನ. ಜೆಮಿಮಾ ಲೆಕ್ಕಕ್ಕೇ ಬರಲಿಲ್ಲ. ನಾಯಕಿ ಹರ್ಮನ್​ಪ್ರೀತ್ ಕೌರ್​ ಗಮನಾರ್ಹ ಪ್ರದರ್ಶನ ನೀಡಿದರೂ ಉಪಯೋಗಕ್ಕೆ ಭಾರದ ಆಟ. ಸ್ಫೋಟಕ ಬ್ಯಾಟರ್ ರಿಚಾ ಘೋಷ್ ಕೂಡ ಮಿಂಚಲಿಲ್ಲ.