Wednesday, 11th December 2024

Women’s T20 World Cup : ಆಸೀಸ್‌ ವಿರುದ್ಧ ಭಾರತಕ್ಕೆ 9 ರನ್ ಸೋಲು, ಸೆಮೀಸ್ ಹಾದಿ ಕಠಿಣ

Women's T20 World Cup

ಶಾರ್ಜಾ: ಭಾರತ ಮಹಿಳೆಯರ ತಂಡ ಟಿ20 ವಿಶ್ವ ಕಪ್‌ನ ಲೀಗ್ (Women’s T20 World Cup) ಹಂತದಲ್ಲಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ರನ್‌ಗಳಿಂದ ಸೋತಿದೆ. ಹೀಗಾಗಿ ಮುಂದಿನ ಹಂತಕ್ಕೇರುವ ಭಾರತ ತಂಡ ಆಸೆ ಕಠಿಣಗೊಂಡಿದೆ. ಪಾಕ್ ಮತ್ತು ನ್ಯೂಜಿಲ್ಯಾಂಡ್ ಪಂದ್ಯದ ಬಳಿಕ ಭಾರತದ ಅವಕಾಶ ಏನೆಂಬುದು ತಿಳಿಯಲಿದೆ. ಇದೇ ವೇಳೆ ಆಸ್ಟ್ರೇಲಿಯಾ ಸತತ 9ನೇ ಬಾರಿ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿ ದಾಖಲೆ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 8 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದರೆ, ಭಾರತ 20 ಓವರ್ ಗಳಲ್ಲಿ 142 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ಭಾರತದ ಬ್ಯಾಟರ್‌ಗಳು ವೈಫಲ್ಯ ಅನುಭವಿದ ಕಾರಣ ಸೋಲು ಕಟ್ಟಿಟ್ಟ ಬುತ್ತಿಯಂತಾಯಿತು.

ಬೌಲರ್‌ಗಳಿಗೆ ಪೂರಕವಾಗಿದ್ದ ಪಿಚ್‌ನಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟ್ ಮಾಡಿತು. ನಿರೀಕ್ಷೆಯಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 151 ರನ್ ಕಲೆ ಹಾಕಿತು. ಗ್ರೇಸ್ ಹ್ಯಾರಿಸ್ 41 ಎಸೆತಗಳಲ್ಲಿ 40 ರನ್ ರನ್ ಗಳಿಸಿದರೆ, ತಹ್ಲಿಯಾ ಮೆಕ್‌ಗ್ರಾತ್ 26 ಎಸೆತಗಳಲ್ಲಿ 32 ರನ್ ಗಳಿಸಿದರು. ಪೆರ್‍ರಿ 23 ಎಸೆತಗಳಲ್ಲಿ 32 ರನ್ ಪೇರಿಸಿದರು. ಭಾರತದ ಪರ ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರು. ಶ್ರೇಯಾಂಕಾ ಪಾಟೀಲ್, ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.

ಬೌಲಿಂಗ್ ಪಿಚ್‌ನಲ್ಲಿ ಎದುರಾದ 152 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಭಾರತ ಆರಂಭದಲ್ಲೇ ಪರದಾಡಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮಾತ್ರ 13 ಎಸೆತಗಳಲ್ಲಿ 20 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು.ಆದರೆ, ಸ್ಮೃತಿ ಮಂಧಾನ 12 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು. ಜೆಮಿಮಾ ರೋಡ್ರಿಗಸ್ 12 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ದೀಪ್ತಿ ಶರ್ಮಾ 25 ಎಸೆತಗಳಲ್ಲಿ 29 ರನ್ ಗಳಿಸಿದ್ದಾಗ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಔಟಾದರು.

ರಿಚಾ ಘೋಷ್ ಅಗತ್ಯ ರನ್ ಕದಿಯಲು ಹೋಗಿ 1 ರನ್‌ ಔಟಾದಾಗ ಭಾರತಕ್ಕೆ ಪೆಟ್ಟು ಬಿತ್ತು. ನಾಯಕಿ ಹರ್ಮನ್‌ಪ್ರೀತ್‌ ಕೌರ್ ಹೋರಾಟ 47 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರೂ ಅವರ ರನ್‌ಗಳಿಂದ ತಂಡಕ್ಕೆ ನೆರವು ದೊರೆಯಲಿಲ್ಲ. ಪೂಜಾ ವಸ್ತ್ರಾಕರ್ 6 ಎಸೆತಗಳಲ್ಲಿ 9 ರನ್ ಗಳಿಸಿದರೆ, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್ ಅವರ ಸಾಧನೆ ಶೂನ್ಯ.

ಇದನ್ನೂ ಓದಿ: Mahela Jaywardene : ಮಹೇಲಾ ಜಯವರ್ಧನೆ ಮುಂಬೈ ಇಂಡಿಯನ್ಸ್‌ ನೂತನ ಕೋಚ್‌

ಸೋಲಿನ ನಡುವೆಯೂ ಭಾರತ ರನ್ ರೇಟ್‌ ಆಧಾರದ ಮೇಲೆ ಭಾರತ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಸದ್ಯ ಮೂರನೇ ಸ್ಥಾನದಲ್ಲಿದ್ದು, ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಪಾಕಿಸ್ತಾನ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ ಭಾರತ ಸೆಮಿಫೈನಲ್‌ಗೆ ಲೆಕ್ಕಾಚಾರದ ಆಧಾರದಲ್ಲಿ ಅವಕಾಶ ಪಡೆಯಲಿದೆ. ನ್ಯೂಜಿಲೆಂಡ್ ಗೆದ್ದ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಲಿದೆ.