Sunday, 6th October 2024

Women’s T20 World Cup : ಭಾರತದ ಮಹಿಳೆಯರಿಗೆ ಮೊದಲ ಪಂದ್ಯದಲ್ಲೇ ಸೋಲು

Women's T20 World Cup

ದುಬೈ: ಎದುರಾಳಿ ತಂಡದ ನಾಯಕಿ ಸೋಫಿ ಡಿವೈನ್ ಅವರ ಆಕರ್ಷಕ ಬ್ಯಾಟಿಂಗ್ ಮತ್ತು ತಂತ್ರಗಾರಿಕೆಯ ಚಾಣಾಕ್ಷತಕ್ಕೆ ತಲೆ ಬಾಗಿದ ಭಾರತ ದುಬೈನಲ್ಲಿ ನಡೆದ ಮಹಿಳಾ ಟಿ 20 ವಿಶ್ವಕಪ್ ನ (Women’s T20 World Cup) ತನ್ನ ಮೊದಲ ಪಂದ್ಯದಲ್ಲಿ 58 ರನ್‌ಗಳ ಸೋಲು ಕಂಡಿದೆ. ಈ ಮೂಲಕ ನ್ಯೂಜಿಲ್ಯಾಂಡ್‌ ತಂಡ ಟಿ 20 ಪಂದ್ಯಗಳಲ್ಲಿ ಭಾರತದ ವಿರುದ್ಧ ಅತಿದೊಡ್ಡ ಗೆಲುವು ದಾಖಲಿಸಿತು. ಬ್ಯಾಟಿಂಗ್‌ಗೆ ಕಷ್ಟಕರವಾದ ಪಿಚ್‌ನಲ್ಲಿ ಸೋಫಿ ಡಿವೈನ್ 36 ಎಸೆತಗಳಲ್ಲಿ ಅಜೇಯ 57 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಬಳಿಕ ಕಿವೀಸ್ ನಾಯಕಿ ನಿಧಾನಗತಿಯ ಬೌಲರ್‌ಗಳನ್ನು ಬಳಸಿಕೊಂಡು ‘ವುಮೆನ್ ಇನ್ ಬ್ಲೂ’ ತಂಡವನ್ನು ಕಾಡಿದರು. ಭಾರತ 19 ಓವರ್‌ಗಳಲ್ಲಿ ಕೇವಲ 102 ರನ್‌ಗಳಿಗೆ ಆಲೌಟ್ ಆಯಿತು.

ಪಿಚ್‌ನಲ್ಲಿ ಡಿವೈನ್ ಮತ್ತು ಆ ತಂಡದ ಇಬ್ಬರು ಆರಂಭಿಕ ಆಟಗಾರರಾದ ಸುಜಿ ಬೇಟ್ಸ್ ಮತ್ತು ಜಾರ್ಜಿಯಾ ಪ್ಲಿಮ್ಮರ್ ಉತ್ತಮವಾಗಿ ಆಡಿದರು. ಅವರು ಹೆಚ್ಚು ಶಕ್ತಿಯುತ ಹೊಡೆತಗಳ ಮೂಲಕ ರನ್ ಗಳಿಸಿದರು. ಆದರೆ, ಭಾರತದ ಆಟಗಾರ್ತಿಗೆ 30 ಯಾರ್ಡ್ ಸರ್ಕಲ್‌ ದಾಟಿ ಚೆಂಡನ್ನು ಕಳುಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಕೆಟ್‌ಗಳನ್ನು ಒಪ್ಪಿಸಬೇಕಾಯಿತು.

ಇದನ್ನೂ ಓದಿ: Salil Ankola : ಮಾಜಿ ಕ್ರಿಕೆಟಿಗ ಸಲೀಲ್‌ ಅಂಕೋಲಾ ತಾಯಿಯ ಮೃತ ದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆ

ಕಿವೀಸ್‌ ಪರ ಬೇಟ್ಸ್ (24 ಎಸೆತಗಳಲ್ಲಿ 27 ರನ್) ಮತ್ತು ಪ್ಲಿಮ್ಮರ್ (23 ಎಸೆತಗಳಲ್ಲಿ 34 ರನ್) ಮೊದಲ ಆರು ಓವರ್‌ಗಳಲ್ಲಿ 55 ರನ್ಗಳನ್ನು ಸೇರಿಸಿದರೆ, ಭಾರತವು ಪವರ್‌ಪ್ಲೇನಲ್ಲಿ ಕೇವಲ 43 ರನ್‌ ಗಳಿಸಿತಷ್ಟೆ. ಶಫಾಲಿ ವರ್ಮಾ (2), ಸ್ಮೃತಿ ಮಂದಾನ (12) ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ (15) ಅಷ್ಟರೊಳಗೆ ಔಟಾಗಿದ್ದರು.

ನ್ಯೂಜಿಲ್ಯಾಂಡ್‌ನ ಎಡಗೈ ಸ್ಪಿನ್ನರ್ ಈಡನ್ ಕಾರ್ಸನ್ (4 ಓವರ್‌ಗಳಲ್ಲಿ 2 ವಿಕೆಟ್‌ 34ರನ್) ಬೌಲಿಂಗ್‌ನಲ್ಲಿ ಮಿಂಚಿದರು. ಅದರೂ ಶಫಾಲಿ ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಹಿನ್ನಡೆ ಉಂಟು ಮಾಡಿದರು. ಹರ್ಮನ್‌ಪ್ರೀತ್ ಕೂಡ ಹೆಚ್ಚು ಹೊತ್ತು ಆಡದಿರುವುದು ಹಾಗೂ ಸ್ಮೃತಿಯ ವೈಫಲ್ಯ ಭಾರತಕ್ಕೆ ಹಿನ್ನಡೆ ಉಂಟು ಮಾಡಿತು.