ದುಬೈ: ಬಹು ನಿರೀಕ್ಷಿತ ಮಹಿಳಾ ಟಿ20 ವಿಶ್ವಕಪ್‌ನ (Womens T20 World Cup) ಚಾಂಪಿಯನ್ ಆಗಿ ನ್ಯೂಜಿಲೆಂಡ್ ತಂಡ ಹೊರ ಹೊಮ್ಮಿದೆ. ಈ ಮೂಲಕ ನೂತನ ತಂಡವೊಂದು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದುಬೈಯ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಭಾನುವಾರ (ಅಕ್ಟೋಬರ್ 20) ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (NZW vs SAW) ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು. ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೆ ನ್ಯೂಜಿಲೆಂಡ್‌ಗೆ ಕಪ್ ಒಲಿಯಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ತಂಡ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‌ಗೆ 126 ರನ್ ಕಲೆ ಹಾಕಲಷ್ಟೇ ಶಕ್ತವಾಗಿ 32 ರನ್‌ಗಳಿಂದ ಸೋಲೋಪ್ಪಿಕೊಂಡಿತು.
ನ್ಯೂಜಿಲೆಂಡ್ ಪರ ಅಮೆಲಿಯಾ ಕೆರ್ 38 ಬಾಲ್‌ನಲ್ಲಿ 43 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಇವರ ಬ್ಯಾಟ್‌ನಿಂದ 4 ಫೋರ್ ಸಿಡಿಯಿತು. ಜತೆಗೆ 3 ವಿಕೆಟ್ ಕೂಡ ಕಿತ್ತು ಮಿಂಚಿದರು. ಬ್ರೂಕ್ ಹ್ಯಾಲಿಡೇ 38 ಮತ್ತು ಸೂಜಿ ಬೇಟ್ಸ್ 32 ರನ್ ಕಲೆ ಹಾಕಿ ತಂಡದ ಸ್ಕೋರ್ ಅನ್ನು 150ರ ಗಡಿ ದಾಟಿಸಿದರು. ರೋಸ್ಮರಿ ಮೈರ್ 3 ವಿಕೆಟ್ ಕಿತ್ತರು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 126 ರನ್ ಕಲೆ ಹಾಕಿತು. ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ 33 ರನ್ ಕಲೆ ಹಾಕಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
👑 CHAMPIONS 👑
— ICC (@ICC) October 20, 2024
New Zealand win their maiden Women's #T20WorldCup title 🏆#WhateverItTakes #SAvNZ pic.twitter.com/DOfyWZgLUf
ದಕ್ಷಿಣ ಆಫ್ರಿಕಾಗೆ ಇದು ಸತತ 2ನೇ ಫೈನಲ್ ಆದರೆ, ನ್ಯೂಜಿಲೆಂಡ್‌ಗೆ 3ನೇ ಫೈನಲ್. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳಿಲ್ಲದೇ ಫೈನಲ್ ನಡೆದಿದೆ.
ಹಿಂದಿನ ಚಾಂಪಿಯನ್ಸ್
2009ರಲ್ಲಿ ನಡೆದ ಮೊದಲ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸೆಣಸಾಡಿದ್ದವು. ಇದರಲ್ಲಿ ಇಂಗ್ಲೆಂಡ್ 6 ವಿಕೆಟ್‌ಗಳಿಂದ ಗೆದ್ದು ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿತ್ತು. 2010ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಫೈನಲ್ ಪಂದ್ಯ ನಡೆದಿತ್ತು. ಇದರಲ್ಲಿ ಆಸ್ಟ್ರೇಲಿಯಾ 3 ರನ್ನುಗಳ ರೋಚಕ ಜಯ ತನ್ನದಾಗಿಸಿಕೊಂಡಿತ್ತು. 2012ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಧ್ಯ ಕಾಳಗ ಏರ್ಪಟ್ಟು ಆಸ್ಟ್ರೇಲಿಯಾ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2014ರಲ್ಲಿ ಮತ್ತೆ ಆಸ್ಟ್ರೇಲಿಯಾ ವನಿತೆಯರು ಟ್ರೋಫಿ ತಮ್ಮದಾಗಿಸಿಕೊಂಡಿದ್ದರು. ಫೈನಲ್ ಪಂದ್ಯದಲ್ಲಿ ಅವರು ಮತ್ತೆ ಇಂಗ್ಲೆಂಡ್ ಅನ್ನು ಸೋಲಿಸಿದ್ದರು.
2016ರ ಫೈನಲ್ ನಡೆದದ್ದು ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ. ಈ ಪೈಕಿ ವೆಸ್ಟ್ ಇಂಡೀಸ್ ಮೊದಲ ಬಾರಿ ಚಾಂಪಿಯನ್ ಆಯಿತು. 2018ರಲ್ಲಿ ಮತ್ತೊಮ್ಮೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಕಾದಾಟಕ್ಕೆ ಸಾಕ್ಷಿಯಾಯ್ತು. ಆ ಬಾರಿ ಕಪ್ ಒಲಿದಿದ್ದು ಆಸ್ಟ್ರೇಲಿಯಾಕ್ಕೆ. 2020ರಲ್ಲಿ ಭಾರತ ಮೊದಲ ಬಾರಿ ಫೈನಲ್ ಪ್ರವೇಶಿಸಿತ್ತು. ಆದರೆ ಆ ಬಾರಿಯೂ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಆಸ್ಟ್ರೇಲಿಯಾ. 2023ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಫೈನಲ್ ಕಾದಾಟ ನಡೆದು ಆಸಿಸ್ ಚಾಂಪಿಯನ್ ಆಗಿತ್ತು.
ಈ ಸುದ್ದಿಯನ್ನೂ ಓದಿ: IND vs NZ: ಮೂರು ಗಂಟೆ ಹೊರತುಪಡಿಸಿ ನಾವು ಉತ್ತಮ ಟೆಸ್ಟ್ ಆಡಿದ್ದೇವೆ; ರೋಹಿತ್ ಪ್ರತಿಕ್ರಿಯೆ