Thursday, 19th September 2024

Women’s T20 World Cup: ಇಂದು ಬೆಂಗಳೂರಿಗೆ ಬರಲಿದೆ ಮಹಿಳಾ ವಿಶ್ವಕಪ್ ಟ್ರೋಫಿ

Women's T20 World Cup

ಬೆಂಗಳೂರು: ಮುಂದಿನ ತಿಂಗಳು ದುಬೈನಲ್ಲಿ ನಡೆಯಲಿರುವ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ(Women’s T20 World Cup) ಟ್ರೋಫಿಯ ಯಾತ್ರೆಯು ಇಂದು (ಶುಕ್ರವಾರ) ಬೆಂಗಳೂರಿಗೆ ಬರಲಿದೆ. ಮಹಿಳೆಯರ ಕ್ರಿಕೆಟ್‌ ತರಬೇತಿಯ ಪ್ರಮುಖ ತಾಣವಾಗಿರುವ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ)ಯಲ್ಲಿ ಪ್ರದರ್ಶನಗೊಳ್ಳಲಿದೆ. ನಾಳೆ(ಸೆ. 7ರಂದು) ನೆಕ್ಸಸ್‌ ಮಾಲ್ ಮತ್ತು ಸೆಪ್ಟೆಂಬರ್‌ 8ರಂದು ಇನ್ಫಿನಿಟಿ ಮಾಲ್‌ನಲ್ಲಿ ಸಾರ್ವಜನಿಕರ ಪ್ರದರ್ಶನ ನಡೆಯಲಿದೆ.

ಸೆಪ್ಟೆಂಬರ್‌ 14 ಮತ್ತು 15ರಂದು ಮುಂಬೈನ ಮಲಾಡ್‌ನಲ್ಲಿ ಟ್ರೋಫಿ ಪ್ರದರ್ಶನಗೊಳ್ಳಲಿದೆ. ಅದರ ನಂತರ ಶ್ರೀಲಂಕಾ, ಬಾಂಗ್ಲಾದೇಶಗಳಿಗೆ ತೆರಳಲಿದೆ. ಅಂತಿಮವಾಗಿ ಪಂದ್ಯಾವವಳಿ ನಡೆಯುವ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) ಮರಳಲಿದೆ. ಪಂದ್ಯಾವಳಿ ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ. ದುಬಾೖ ಮತ್ತು ಶಾರ್ಜಾದಲ್ಲಿ ಒಟ್ಟಾರೆ 23 ಪಂದ್ಯಗಳು ನಡೆಯಲಿವೆ. ಒಟ್ಟು 19 ದಿನ ಪಂದ್ಯಾವಳಿ ಸಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್‌ನಲ್ಲಿ ಮುಖಾಮುಖಿಯಾಗಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಕಣಕ್ಕಿಳಿಯಲಿದೆ.

ಭಾರತ ತಂಡ ಅಕ್ಟೋಬರ್ 4 ರಂದು ನ್ಯೂಜಿಲ್ಯಾಂಡ್​ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದೆ. ಸಾಂಪ್ರದಾಯಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಅಕ್ಟೋಬರ್ 6 ರಂದು ಪಂದ್ಯವನ್ನಾಡಲಿದೆ. ಅಕ್ಟೋಬರ್ 13 ರಂದು ಆರು ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದ ವಿರುದ್ಧ ಆಡಲಿದೆ. ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ Haryana Polls: ಇಂದು ವಿನೇಶ್, ಬಜರಂಗ್ ಕಾಂಗ್ರೆಸ್‌ ಸೇರ್ಪಡೆ

ಪ್ರತಿಯೊಂದು ತಂಡವು ಬಣ ಹಂತದಲ್ಲಿ ನಾಲ್ಕು ಪಂದ್ಯಗಳನ್ನಾಡಲಿದ್ದು ಅಗ್ರ ಎರಡು ತಂಡಗಳು ಸೆಮಿಫೈನಲಿಗೇರಲಿವೆ. ಸೆಮಿಫೈನಲ್ಸ್‌ ಅ. 17 ಮತ್ತು 18ರಂದು ನಡೆಯಲಿದ್ದರೆ ದುಬಾೖಯಲ್ಲಿ ಅ. 20ರಂದು ಫೈನಲ್‌ ಜರಗಲಿದೆ.

ಲೀಗ್​ ಹಂತದ ಯಾವುದೇ ಪಂದ್ಯಗಳಿಗೆ ಮೀಸಲು ದಿನವಿಲ್ಲ. ಕೇಲವ ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಯಾಗಿದೆ. ಪಂದ್ಯ ಟೈ ಆದರೆ ಸೂಪರ್‌ ಓವರ್‌ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈ ಆದರೆ ಇನ್ನೊಂದು ಸೂಪರ್‌ ಓವರ್‌ ಇರಲಿದೆ. ಹೀಗೆ ಸ್ಪಷ್ಟ ಫಲಿತಾಂಶ ಲಭಿಸುವ ತನಕ ಸೂಪರ್‌ ಓವರ್‌ ಜಾರಿಯಲ್ಲಿರುತ್ತದೆ.

ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯ ದಂಗೆಯಿಂದಾಗಿ ಕೆಲ ದಿನಗಳ ಹಿಂದೆ ಪಂದ್ಯಾವಳಿಯ(ICC Women’s T20 World Cup)ಯನ್ನು ಯುಎಇ(UAE)ಗೆ ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ ವೇಳಾಪಟ್ಟಿಯಲ್ಲಿ ತಾಣಗಳ ಹೆಸರನ್ನು ಪರಿಷ್ಕೃತಗೊಳಿಸಲಾಗಿದೆ. ಪಂದ್ಯಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.