Tuesday, 19th November 2024

World Cup Final 2023: ತವರಿನ ಏಕದಿನ ವಿಶ್ವಕಪ್​ ಫೈನಲ್ ಸೋಲಿನ ಆಘಾತಕ್ಕೆ ಒಂದು ವರ್ಷ!

ನವದೆಹಲಿ: 140 ಕೋಟಿ ಭಾರತೀಯರ ಕನಸು ಭಗ್ನಗೊಳಿಸಿದ ಕ್ಷಣಕ್ಕೆ ಇಂದಿಗೆ (ಮಂಗಳವಾರ) ಭರ್ತಿ ಒಂದು ವರ್ಷ. 2023ರ ನವೆಂಬರ್​ 19ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ತವರಿನ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ(World Cup Final 2023) ಹಾಟ್ ಫೇವರಿಟ್​ ಆಗಿ ಕಣಕ್ಕಿಳಿದ್ದ ಭಾರತಕ್ಕೆ ಆಸ್ಟ್ರೇಲಿಯಾ ಆಘಾತವಿಕ್ಕಿದ ದಿನವಿದು.

ಟೂರ್ನಿಯಲ್ಲಿ ಸೋಲನೇ ಕಾಣದೆ ಅಜೇಯವಾಗಿ ಫೈನಲ್‌ ತಲುಪಿದ್ದ ಭಾರತ 12 ವರ್ಷಗಳ ಬಳಿಕ ಏಕದಿನ ವಿಶ್ವಕಪ್​ ವಶಪಡಿಸಿಕೊಳ್ಳುತ್ತದೆ ಎಂದು ತುದಿಗಾಗಲ್ಲಿ ಕಾದು ಕುಳಿತ್ತಿದ್ದ ಭಾರತೀಯರಿಗೆ ಆಸ್ಟ್ರೇಲಿಯಾ ತಂಡ ಅಡ್ಡಗಾಲಿಕ್ಕಿತು. ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮರ್ಥ್ಯಕ್ಕೆ ಸವಾಲೊಡ್ಡಿ ನಿಂತು ಆರನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡಿತು. ಕ್ರೀಡಾಂಗಣದಲ್ಲಿ ಸೇರಿದ್ದ ಲಕ್ಷಾಂತರ ಭಾರತದ ಅಭಿಮಾನಿಗಳು ಮೌನಕ್ಕೆ ಶರಣಾಗಿ ಹೋದರು. ಸತತ 10 ಗೆಲುವಿನೊಂದಿಗೆ ಕಪ್ ಎತ್ತುವ ವಿಶ್ವಾಸ ಹೊಂದಿದ್ದ ರೋಹಿತ್ ಬಳಗ ಗೆಲುವಿನ ಶಿಖರದಿಂದ ಜಾರಿತು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಬ್ಯಾಟಿಂಗ್‌ ಕುಸಿತ ಭರ್ತಿ 50 ಓವರ್​ಗಳಲ್ಲಿ 240 ರನ್​ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ್ದ ಆಸೀಸ್ ತನ್ನ ಸಾಮರ್ಥ್ಯ ಮೆರೆದು 43 ಓವರ್ ಗಳಲ್ಲಿ 4ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತು. ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅತ್ಯಮೋಘ ಶತಕ ಸಿಡಿಸಿ ಭಾರತದ ಗೆಲುವುವನ್ನು ಕಸಿದುಕೊಂಡರು.

ಇದನ್ನೂ ಓದಿ IND vs AUS: ʻಭಾರತದ ನಿರ್ಧಾರದಿಂದ ಶಾಕ್‌ ಆಯ್ತುʼ-ಮೈಕಲ್‌ ವಾನ್‌ ಹೀಗೆನ್ನಲು ಕಾರಣವೇನು?

ಸ್ಮರಣೀಯ ಆಟವಾಡಿದ ಹೆಡ್, ಕಪ್ ಗೆಲ್ಲಲು ಕೇವಲ ಎರಡೇ ರನ್ ಬಾಕಿ ಇದ್ದಾಗ 137 ರನ್ ಗಳಿಸಿದ್ದ ವೇಳೆ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. 120 ಎಸೆತಗಳಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದ ಹೆಡ್ 15 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿದರು. ಲಬುಶೇನ್ ಔಟಾಗದೆ 58 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತಕ್ಕೆ ಆಸರೆಯಾದದ್ದು ರೋಹಿತ್‌, ವಿರಾಟ್‌ ಮತ್ತು ಕನ್ನಡಿಗ ರಾಹುಲ್‌ ಮಾತ್ರ. ಉಳಿದವರಿಂದ ನಿರೀಕ್ಷತ ಪ್ರದರ್ಶನ ಕಂಡು ಬಾರದೇ ಇದದ್ದು ಭಾರತ ಸೋಲಿಗೆ ಪ್ರಮುಖ ಕಾರಣವಾಯಿತು. ರೋಹಿತ್‌ 47 ರನ್ ಗಳಿಸಿದರೆ, ತಾಳ್ಮೆಯ ಆಟವಾಡಿದ ಕೊಹ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿದ್ದ ವೇಳೆ ದುರದೃಷ್ಟವೆಂಬಂತೆ ಔಟಾದರು. ಕೊಹ್ಲಿ ವಿಕೆಟ್‌ ಪತನದ ಬಳಿಕ ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಸಣ್ಣ ಮೊತ್ತವನ್ನು ಕಟ್ಟಿ ಹಾಕಲು ಭಾರತೀಯ ಬೌಲರ್‌ಗಳು ಕೂಡ ಎಡವಿದರು.