ಯೂಫಾ: ಭಾರತದ ಗೌರವ್ ಬಲಿಯಾನ್ ಹಾಗೂ ದೀಪಕ್ ಅವರು ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
79 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಎದುರಾಳಿಗಳನ್ನು ಗೌರವ್ ಸುಲಭವಾಗಿ ಸೋಲಿಸಿ ಮುನ್ನಡೆದರು. ತಜಿಕಿಸ್ತಾನದ ಅಬೂಬಕರ್ ಶುಕುರೊವ್ ಅವರನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಮಣಿಸಿ, ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 5-2ರಿಂದ ರಷ್ಯಾದ ಅಲಿಕ್ ಬಡ್ತೇಯ್ ಎದುರು ಜಯ ಸಾಧಿಸಿದರು.
ನಾಲ್ಕರ ಘಟ್ಟದ ಬೌಟ್‌ನಲ್ಲಿ ಗೌರವ್, ಇರಾನ್‌ನ ಮೊಹಮ್ಮದ್ ಅಸ್ಘರ್ ನೊಕಿದಿಲಾರಿಮಿ ಎದುರು ಸೆಣಸುವರು. ಕಳೆದ ಜೂನ್‌ನಲ್ಲಿ ನಡೆದ ಯಾಸರ್ ದೋಗು ಟೂರ್ನಿಯಲ್ಲಿ ಸೀನಿಯರ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು.
ದೀಪಕ್ (97 ಕೆಜಿ ವಿಭಾಗ) ಅವರು 5-1ರಿಂದ ಬೆಲಾರಸ್‌ನ ಅಲಿಯಾಕ್ಸೆಯಿ ಪರ್ಕೊಮೆಂಕಾ ಎದುರು ಗೆದ್ದು ತಮ್ಮ ಅಭಿಯಾನ ಆರಂಭಿಸಿದರು. ಎಂಟರಘಟ್ಟದ ಹಣಾಹಣಿಯಲ್ಲಿ 9-4ರಿಂದ ಜಾರ್ಜಿಯಾದ ಲೂಕಾ ಕುಚ್ವಾ ಎದುರು ಜಯಿಸಿದರು. ಮುಂದಿನ ಸುತ್ತಿನಲ್ಲಿ ದೀಪಕ್ ಅವರಿಗೆ ಅಮೆರಿಕದ ಬ್ಯಾಕ್ಸಟನ್ ಜೇಮ್ಸ್ ಅಮೋಸ್ ಸವಾಲು ಎದುರಾಗಿದೆ.
57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಶುಭಮನ್ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದರು. ಅವರಿಗೆ ರಷ್ಯಾದ ರಮಜಾನ್ ಬಾಗವುದಿನೊವ್ ಸವಾಲು ಮೀರಲಾಗಲಿಲ್ಲ.