Sunday, 24th November 2024

WPL 2025: ಡಬ್ಲ್ಯುಪಿಎಲ್‌ ರೀಟೈನ್‌ ಪಟ್ಟಿ ಸಲ್ಲಿಕೆ ಗಡುವು ವಿಸ್ತರಣೆ

ಮುಂಬಯಿ: ಮುಂದಿನ ವರ್ಷ ನಡೆಯುವ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌(WPL 2025) (ಡಬ್ಲ್ಯುಪಿಎಲ್‌) ಆಟಗಾರ್ತಿಯರ ರೀಟೈನ್‌ ಪಟ್ಟಿ(wpl 2025 retention) ಸಲ್ಲಿಸುವ ದಿನಾಂಕವನ್ನು ಬಿಸಿಸಿಐ ಮತ್ತಷ್ಟು ವಿಸ್ತರಿಸಿದೆ. ಫ್ರಾಂಚೈಸಿಗಳಿಗೆ ನವೆಂಬರ್‌ 7ರ ಗಡುವು ನೀಡಿದೆ. ಈ ಮೊದಲು ಅಕ್ಟೋಬರ್‌ 15ರ ಗಡುವು ನೀಡಿತ್ತು. ರಿಟೈನ್‌ ಪಟ್ಟಿ ಸಲ್ಲಿಕೆ ಬಳಿಕ ಮಿನಿ ಹರಾಜು ದಿನಾಂಕವನ್ನು ಬಿಸಿಸಿಐ ಪ್ರಕಟಿಸಲಿದೆ. ಮಿನಿ ಹರಾಜಿನ ಪರ್ಸ್‌ ಮೊತ್ತ 15 ಕೋಟಿ ಆಗಿದೆ.

ವಿದೇಶದಲ್ಲಿ ಐಪಿಎಲ್‌ ಮೆಗಾ ಹರಾಜು

ಐಪಿಎಲ್‌-2025ರ ಆವೃತ್ತಿಗಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ರಿಯಾಧ್‌ ಅಥವಾ ಜೆಡ್ಡಾ ನಗರದಲ್ಲಿ ನಡೆಯುವ ನಿರೀಕ್ಷೆಯಿದೆ. ಆಟಗಾರರ ರಿಟೇನ್​ ನಿಯಮಾವಳಿಯನ್ನು ಈಗಾಗಲೇ ಬಿಸಿಸಿಐ ಪ್ರಕಟಿಸಿದೆ. ಸದ್ಯ ಎಲ್ಲ ತಂಡಗಳು ಮೆಗಾ ಹರಾಜಿಗೆ ಸಿದ್ಧತೆ ಆರಂಭಿಸಿದೆ. ರಿಟೇನ್​ ಪಟ್ಟಿ ಅಂತಿಮಗೊಳಿಸಲು ತಂಡಗಳಿಗೆ ಬಿಸಿಸಿಐ ನವೆಂಬರ್​ 15ರವರೆಗೆ ಸಮಯ ನೀಡುವ ನಿರೀಕ್ಷೆ ಇದೆ. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಡಿಸೆಂಬರ್​ 1ರಂದು ಐಸಿಸಿಯ ಹೊಸ ಅಧ್ಯಕ್ಷರಾಗಿ​ ಅಧಿಕಾರ ಸ್ವೀಕರಿಸಲಿದ್ದಾರೆ. ಹೀಗಾಗಿ ಇದಕ್ಕೂ ಮುನ್ನ ನವೆಂಬರ್​ನಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿಸುವುದು ಬಿಸಿಸಿಐ ಮತ್ತು ಐಪಿಎಲ್‌ ಆಡಳಿತ ಮಂಡಳಿಯ ಯೋಜನೆಯಾಗಿದೆ. ಮೆಗಾ ಹರಾಜು ಪ್ರಕ್ರಿಯೆ(IPL Auction) ನವೆಂಬರ್​ 3 ಅಥವಾ 4ನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2025: ಆರ್​ಟಿಎಂ ನಿಯಮ ಬದಲಾವಣೆಗೆ ಬಿಸಿಸಿಐಗೆ ಪತ್ರ ಬರೆದ ಫ್ರಾಂಚೈಸಿ ಮಾಲಕರು

ಪ್ರತಿ ತಂಡಗಳ ಬಜೆಟ್​ ಮಿತಿ 120 ಕೋಟಿ ರೂ.ಗೆ ಏರಿಸಲಾಗಿದೆ. ಆದರೆ ಗರಿಷ್ಠ 5 ಆಟಗಾರರನ್ನು ರಿಟೇನ್​ ಮಾಡಿದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಯಾಕೆಂದರೆ 5 ಆಟಗಾರರ ರಿಟೇನ್​ಗೆ ಕ್ರಮವಾಗಿ 18, 14, 11, 18, 14 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು 3 ಆಟಗಾರರನ್ನಷ್ಟೇ ರಿಟೇನ್​ ಮಾಡಿದರೆ, ಹರಾಜಿನಲ್ಲಿ 3 ಆರ್​ಟಿಎಂ ಬಳಸಬಹುದಾಗಿದೆ. 4 ಮತ್ತು 5ನೇ ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ 18 ಮತ್ತು 14 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ! ಹೀಗಾಗಿ ಫ್ರಾಂಚೈಸಿಗಳಿಗೆ ಹರಾಜಿನ ವೇಳೆ ಕಡಿಮೆ ಮೊತ್ತ ಉಳಿಯಲಿದೆ.

ಈ ಹಿಂದೆ ಇದ್ದ ಆರ್​ಟಿಎಂ ನಿಯಮದ ಪ್ರಕಾರ ಆಟಗಾರನೊಬ್ಬ ಹರಾಜಿನಲ್ಲಿ ತನ್ನ ಮಾರುಕಟ್ಟೆ ಮೌಲ್ಯದೊಂದಿಗೆ ಮೂಲ ತಂಡಕ್ಕೆ ಮರಳಬಹುದಾಗಿತ್ತು. ಆದರೆ ಈಗಿನ ಬದಲಾವಣೆಯಿಂದಾಗಿ ಆಟಗಾರನ ಮೊತ್ತ ಏರಿಕೆಯಾಗುತ್ತದೆ. ಇದು ಮೂಲ ತಂಡಕ್ಕೆ ಆತನನ್ನು ಉಳಿಸಿಕೊಳ್ಳಲು ಕಷ್ಟವಾಗಲಿದೆ. ಈಗಾಗಲೇ ಈ ಬಗ್ಗೆ ಫ್ರಾಂಚೈಸಿಗಳು ಅಪಸ್ವರವೆತ್ತಿದೆ.