ಕಾನ್ಪುರ: ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಏಳು ವಿಕೆಟ್ ಅಂತರದಿಂದ ಗೆದ್ದ ಭಾರತ, ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2023-25 ಅಂಕಪಟ್ಟಿಯಲ್ಲಿ(WTC Points Table) ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಸೋಲು ಕಂಡ ಬಾಂಗ್ಲಾದೇಶ 8ನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ತಂಡವು ಮೊದಲ ಸ್ಥಾನದಲ್ಲಿದೆ. ಆಡಿರುವ 11 ಪಂದ್ಯಗಳಲ್ಲಿ 8 ಪಂದ್ಯ ಗೆದ್ದಿರುವ ರೋಹಿತ್ ಪಡೆ 74.24 ಶೇಕಡಾವಾರು ಅಂಕ ಹೊಂದಿದೆ. ದ್ವಿತೀಯ ಟೆಸ್ಟ್ ಪಂದ್ಯದ ಗೆಲುವಿಗೂ ಮುನ್ನ ಭಾರತದ ಗೆಲುವಿನ ಶೇಕಡಾವಾರು 71.67ರಷ್ಟಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಗೆದ್ದ ಶ್ರೀಲಂಕಾ 55.56 ಶೇಕಡಾವಾರು ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಹಿಂದಿಕ್ಕಲು ಲಂಕಾಗೆ ಕೇವಲ 7 ಅಂಕದ ವ್ಯತ್ಯಾಸವಿದೆ.
ಡಬ್ಲ್ಯೂಟಿಸಿ ಫೈನಲ್ ತಲುಪುವ ಅವಕಾಶವನ್ನು ಹೆಚ್ಚಿಸಲು, ಭಾರತವು ತನ್ನ ಉಳಿದ 8 ಪಂದ್ಯಗಳಲ್ಲಿ ಕನಿಷ್ಠ ಆರನ್ನು ಗೆಲ್ಲಬೇಕು. ಹೀಗಾಗಿ ಮುಂದಿನ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿರುದ್ದದ ಸರಣಿ ಅತ್ಯಂತ ಪ್ರಮುಖವಾಗಲಿದೆ. ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ಇನ್ನ ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಸರಣಿಯನ್ನಾಡಲಿದೆ. ಇದನ್ನು ಕ್ಲೀನ್ ಸ್ವೀಪ್ ಮಾಡಿ, ಆಸೀಸ್ ಭಾರತ ವಿರುದ್ಧ ಸರಣಿ ಸೋತರೆ ಆಗ ಲಂಕಾಗೆ 2ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸುವ ಅವಕಾಶವೊಂದು ಸಿಗಲಿದೆ.
ಇದನ್ನೂ ಓದಿ IND vs BAN: ಮುರಳೀಧರನ್ ವಿಶ್ವ ದಾಖಲೆ ಸರಿಗಟ್ಟಿದ ಅಶ್ವಿನ್
ಜೂನ್‌ನಲ್ಲಿ ಫೈನಲ್
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ದಿನಾಂಕವನ್ನು ಈಗಾಗಲೇ ಘೋಷಿಸಲಾಗಿದೆ. ಫೈನಲ್ ಪಂದ್ಯವು ಜೂನ್ 11 ರಿಂದ 15 ರ ತನಕ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಜೂನ್ 16 ಮೀಸಲು ದಿನವಾಗಿದೆ. ಕ್ರಿಕೆಟ್ ಕಾಶಿ ಎಂದು ಕರೆಯಲಾಗುವ ಲಾರ್ಡ್ಸ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಯುತ್ತಿದೆ. ಮೊದಲ ಆವೃತ್ತಿಯ ಫೈನಲ್ (2021) ಸೌತ್‌ಹ್ಯಾಂಪ್ಟನ್ನಲ್ಲಿ ಮತ್ತು ಎರಡನೇ ಆವೃತ್ತಿಯ ಫೈನಲ್ (2023) ಓವಲ್‌ನಲ್ಲಿ ನಡೆದಿತ್ತು. ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲೆರಡು ಬಾರಿ ಚಾಂಪಿಯನ್ ಆಗಿ ಮೂಡಿಬಂದಿದ್ದವು. ಎರಡು ಬಾರಿಯೂ ಭಾರತ ರನ್ನರ್ ಅಪ್ ಆಗಿತ್ತು. ಮೂರನೇ ಆವೃತ್ತಿಯಲ್ಲಿ ಫೈನಲ್‌ಗೆ ಭಾರತ ಅರ್ಹತೆ ಪಡೆದು ಕಪ್ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ.