ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ.
ಆಸ್ಟ್ರೇಲಿಯಾ ಭಾರತಕ್ಕೆ ಗೆಲ್ಲಲು ದಾಖಲೆಯ 444 ರನ್ ಗುರಿ ನೀಡಿದೆ. ಸೋಲು- ಗೆಲುವಿಗೆ ಇಂದೇ ಕೊನೆಯ ದಿನವಾಗಿದೆ. ಇತ್ತ, 2ನೇ ಇನಿಂಗ್ಸ್ ಆರಂಭಿಸಿರುವ ಭಾರತ ಕೆಚ್ಚೆದೆಯ ಹೋರಾಟ ನಡೆಸುತ್ತಿದ್ದು, 4ನೇ ದಿನದ ಅಂತ್ಯಕ್ಕೆ 3 ವಿಕೆಟ್ಗೆ 164 ರನ್ ಗಳಿಸಿದೆ. ಗೆಲುವಿಗೆ ಇನ್ನೂ 280 ರನ್ ಬೇಕಿದೆ. ಕೈಯಲ್ಲಿ 7 ವಿಕೆಟ್ಗಳಿವೆ.
4 ದಿನದಾಟದಲ್ಲಿ ಮೇಲುಗೈ ಸಾಧಿಸಿದ ಆಸೀಸ್ ಪಡೆಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಪ್ಲಾನ್ನಲ್ಲಿದ್ದ ಭಾರತಕ್ಕೆ ಅಲೆಕ್ಸ್ ಕ್ಯಾರಿ ಮತ್ತು ಮಿಚೆಲ್ ಸ್ಟಾರ್ಕ್ ಬಲವಾದ ಪೆಟ್ಟು ಕೊಟ್ಟರು. ಈ ಇಬ್ಬರು ಸೇರಿ ದೊಡ್ಡ ಇನಿಂಗ್ಸ್ ಕಟ್ಟುವ ಮೂಲಕ ಭಾರತಕ್ಕೆ 444 ರನ್ಗಳ ಸವಾಲಿನ ದಾಖಲೆಯ ಗುರಿ ನೀಡುವಂತೆ ಮಾಡಿದರು.
ಕೊಹ್ಲಿ, ರಹಾನೆಯೇ ಆಧಾರ: 4ನೇ ದಿನದಾಂತ್ಯಕ್ಕೆ ಕ್ರೀಸ್ ಕಾಯ್ದುಕೊಂಡಿರುವ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ಮೊದಲ ಇನಿಂಗ್ಸ್ನ ಆಪದ್ಬಾಂಧವ ಅಜಿಂಕ್ಯ ರಹಾನೆಯೇ ಭಾರತದ ಗೆಲುವಿಗಿರುವ ಆಶಾಕಿರಣ. ಇಬ್ಬರೂ ತಲಾ 44 ಮತ್ತು 20 ರನ್ ಗಳಿಸಿದ್ದಾರೆ. ಶ್ರೀಕರ್ ಭರತ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಕೂಡ ಮಿಂಚಬೇಕು.
ಚೇತೇಶ್ವರ್ ಪೂಜಾರಾ ವೈಫಲ್ಯ: ಪೂಜಾರಾ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಅಲ್ಲದೇ, ಕೌಂಟಿ ಕ್ರಿಕೆಟ್ನಲ್ಲಿ ರಾಶಿ ರಾಶಿ ರನ್ ಕಲೆ ಹಾಕಿ ಇಂಗ್ಲೆಂಡ್ ವಾತಾವರಣಕ್ಕೆ ಒಗ್ಗಿದ್ದರು. ಆದರೆ, ಮೊದಲ ಇನಿಂಗ್ಸ್ನಲ್ಲಿ 14 ರನ್, 2ನೇ ಇನಿಂಗ್ಸ್ನ ಮಹತ್ವದ ಘಟ್ಟದಲ್ಲಿ 27 ರನ್ಗೆ ಔಟಾದರು. ಅಲ್ಲಿ, ಚುಟುಕು ಮಾದರಿಯಲ್ಲಿ ಬಳಸುವ ಹೊಡೆತವಾದ ‘ಅಪ್ಪರ್ ಕಟ್’ ಮಾಡಲು ಹೋಗಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ್ದೂ ಟೀಕೆಗೆ ಗುರಿಯಾಗಿದೆ.
ಭರ್ಜರಿ ಲಯದಲ್ಲಿರುವ ಶುಭಮನ್ ಗಿಲ್ 18 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ ಬೋಲೆಂಡ್ ಎಸೆತದಲ್ಲಿ ಬ್ಯಾಟ್ಗೆ ಸವರಿಕೊಂಡು ಹೋದ ಚೆಂಡು ಸ್ಲಿಪ್ನಲ್ಲಿದ್ದ ಕ್ಯಾಮರೂನ್ ಗ್ರೀನ್ ಕೈ ಸೇರಿತು. ಆದರೆ, ಚೆಂಡು ನೆಲಕ್ಕೆ ತಾಗಿದ ಅನುಮಾನವಿತ್ತು. ಮೂರನೇ ಅಂಪೈರ್ ಹಲವು ರಿಪ್ಲೈಗಳ ಮೂಲಕ ಪರಿಶೀಲಿಸಿ ಔಟ್ ನೀಡಿದರು. ದೃಶ್ಯಗಳಲ್ಲಿ ಚೆಂಡು ನೆಲಕ್ಕೆ ತಾಕುತ್ತಿರುವುದು ಕಂಡುಬಂದಿತ್ತು.
ಭಾರತದ ತನ್ನಲ್ಲಿರುವ 7 ವಿಕೆಟ್ಗಳಿಂದ ಗೆಲುವು ಸಾಧಿಸಿದರೆ ಚರಿತ್ರೆ ಸೃಷ್ಟಿಸಲಿದೆ. ಸಾಧ್ಯವಾಗದೇ ಇದ್ದಲ್ಲಿ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಪಂದ್ಯ ಡ್ರಾ ಆದಲ್ಲಿ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಆಗಿ ಘೋಷಿಸಲಾಗುತ್ತದೆ. ಉಭಯ ತಂಡಗಳಲ್ಲಿ ಯಾರೇ ಗೆದ್ದರೂ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ. ಕಳೆದ ಬಾರಿ ನ್ಯೂಜಿಲ್ಯಾಂಡ್ ಚಾಂಪಿಯನ್ ಆಗಿತ್ತು.