Thursday, 12th December 2024

Yashasvi Jaiswal : ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್‌; ಯಾವ ದಾಖಲೆ ಅದು?

Yashasvi Jaiswal

ಬೆಂಗಳೂರು: ಯುವ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್ (Yashasvi Jaiswal) ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಜೈಸ್ವಾಲ್ ಅವರು ಭಾರತದ ಮಾಜಿ ಸ್ಫೋಟಕ ಅರಂಭಿಕ ಬ್ಯಾಟರ್‌ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ 233 ರನ್‌ಗಳಿಗೆ ಆಲೌಟ್ ಆಗಿದೆ. ಮೊಮಿನುಲ್ ಹಕ್ 194 ಎಸೆತಗಳಲ್ಲಿ 17 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 107 ರನ್ ಗಳಿಸಿದ್ದಾರೆ. ಬಾಂಗ್ಲಾದೇಶದ ಇತರ ಯಾವುದೇ ಬ್ಯಾಟರ್‌ಗಳು ಅರ್ಧ ಶತಕ ದಾಟಲಿಲ್ಲ.

ಭಾರತದ ಪರ ಜಸ್ಪ್ರೀತ್ ಬುಮ್ರಾ 18 ಓವರ್‌ಗಳಲ್ಲಿ 50 ರನ್ ನೀಡಿ ಮುಷ್ಫಿಕರ್ ರಹೀಮ್ ಮತ್ತು ಮೆಹಿದಿ ಹಸನ್ ಮಿರಾಜ್ ಸೇರಿದಂತೆ 3 ವಿಕೆಟ್ ಪಡೆದರು. ಭಾರತದ ಪರ ಆಕಾಶ್ ದೀಪ್, ರವಿಚಂದ್ರನ್ ಅಶ್ವಿನ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ಖಾಲಿದ್ ಅಹ್ಮದ್ ಅವರನ್ನು ಔಟ್ ಮಾಡಿದರು.

3 ಓವರ್ ಗಳಲ್ಲಿ 50 ರನ್ ಪೂರೈಸಿದ ಟೀಂ ಇಂಡಿಯಾ

ಯಶಸ್ವಿ ಜೈಸ್ವಾಲ್ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಎಡಗೈ ಬ್ಯಾಟರ್‌ ಮತ್ತು ರೋಹಿತ್ ಶರ್ಮಾ 14 ಕ್ಕೂ ಹೆಚ್ಚು ರನ್ ರೇಟ್‌ನಲ್ಲಿ ರನ್ ಗಳಿಸಿದರು. ಈ ಜೋಡಿಯು ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಮೂರು ಓವರ್ ಗಳಲ್ಲಿ ಐವತ್ತು ರನ್ ಗಳ ಗಡಿ ದಾಟಲು ಭಾರತ ತಂಡಕ್ಕೆ ನೆರವಾದರು.

ಇದನ್ನೂ ಓದಿ: Virat Kohli : ಸಚಿನ್‌ ತೆಂಡೂಲ್ಕರ್ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ತಂಡ ಎಂಬ ಹೊಸ ದಾಖಲೆಯನ್ನು ಭಾರತ ನಿರ್ಮಿಸಿದೆ. ಈ ವರ್ಷದ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 4.2 ಓವರ್‌ಗಳಲ್ಲಿ 50 ರನ್ ಗಳಿಸುವ ಮೂಲಕ ನಿರ್ಮಿಸಿದ್ದ ತನ್ನದೇ ದಾಖಲೆಯನ್ನು ಭಾರತ ಮುರಿದಿದೆ. ರೋಹಿತ್ ಶರ್ಮಾ 11 ಎಸೆತಗಳಲ್ಲಿ 23 ರನ್ ಸಿಡಿಸಿದರು.

ಸೆಹ್ವಾಗ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್

ರೋಹಿತ್ ಶರ್ಮಾ ಔಟಾದ ನಂತರವೂ ಯಶಸ್ವಿ ಜೈಸ್ವಾಲ್ ತಮ್ಮ ಪ್ರಭಾವಶಾಲಿ ಪ್ರದರ್ಶನ ನೀಡಿದರು. ಜೈಸ್ವಾಲ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಭಾರತೀಯ ಆರಂಭಿಕ ಆಟಗಾರ ಮತ್ತು ಮೂರನೇ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟಾರೆಯಾಗಿ, ಅವರು ಭಾರತೀಯ ತಂಡದ ಜಂಟಿ ಮೂರನೇ ವೇಗದ ಅರ್ಧಶತಕವಾಗಿದೆ..

ಭಾರತದ ಪರ ಅತಿ ವೇಗದ ಟೆಸ್ಟ್ ಅರ್ಧಶತಕಗಳು

  • ರಿಷಭ್ ಪಂತ್ 28 ಎಸೆತ, ಶ್ರೀಲಂಕಾ ವಿರುದ್ಧ, 2022
  • ಕಪಿಲ್ ದೇವ್ 30 ಎಸೆತ, ಪಾಕಿಸ್ತಾನ ವಿರುದ್ಧ, 1982
  • ಶಾರ್ದೂಲ್ ಠಾಕೂರ್ 31 ಎಸೆತ, ಇಂಗ್ಲೆಂಡ್ ವಿರುದ್ಧ, 2021
  • ಯಶಸ್ವಿ ಜೈಸ್ವಾಲ್ 31 ಎಸೆತ, ಬಾಂಗ್ಲಾದೇಶ ವಿರುದ್ಧ, 2024
  • ವೀರೇಂದ್ರ ಸೆಹ್ವಾಗ್ 32 ಎಸೆತ, ಇಂಗ್ಲೆಂಡ್ ವಿರುದ್ಧ, 2000

ಜೈಸ್ವಾಲ್ ಭಾರತದ ಅತ್ಯಂತ ವೇಗದ ಟೆಸ್ಟ್ ಶತಕ ಗಳಿಸುವ ಹಾದಿಯಲ್ಲಿದ್ದರು. ಆದಾಗ್ಯೂ ಅವರ ಇನ್ನಿಂಗ್ಸ್ ಅನಿರೀಕ್ಷಿತವಾಗಿ ಕೊನೆಗೊಂಡಿತು. ಜೈಸ್ವಾಲ್ 51 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 72 ರನ್ ಗಳಿಸಿದರು.

ಅಜಿಂಕ್ಯ ರಹಾನೆ ದಾಖಲೆ ಮುರಿದ ಯಶಸ್ವಿ

ಜುಲೈ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಮಾಡಿದ 22 ವರ್ಷದ ಎಡಗೈ ಬ್ಯಾಟರ್‌ 2023-25 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಋತುವಿನ್ಲಲಿ 11 ಪಂದ್ಯಗಳಲ್ಲಿ 19 ಇನ್ನಿಂಗ್ಸ್‌ಗಳಲ್ಲಿ 1,166 ರನ್ ಗಳಿಸಿದ್ದಾರೆ. ಒಂದೇ ಡಬ್ಲ್ಯುಟಿಸಿ ಆವೃತ್ತಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಅಜಿಂಕ್ಯ ರಹಾನೆ ಅವರ ದಾಖಲೆ ಮುರಿದಿದ್ದಾರೆ.

ಡಬ್ಲ್ಯುಟಿಸಿಯ ಒಂದೇ ಆವೃತ್ತಿಯಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ರನ್

  • ಯಶಸ್ವಿ ಜೈಸ್ವಾಲ್ 2023-25, 1166 ರನ್‌
  • ಅಜಿಂಕ್ಯ ರಹಾನೆ 2019-21, 1159 ರನ್‌
  • ರೋಹಿತ್ ಶರ್ಮಾ 2019-21, 1094 ರನ್‌